ವಾಷಿಂಗ್ಟನ್ : ಅಮೆರಿಕದ ಗನ್ ಸಂಸ್ಕೃತಿ ಇನ್ನಷ್ಟು ಜೀವಗಳನ್ನು ಬಲಿತೆಗೆದುಕೊಂಡಿದೆ.
ಅಮೆರಿಕದ ಲೂಸಿಯಾನಾದ ಲಫಾಯಟ್ಟೆಯ ಚಿತ್ರಮಂದಿರದೊಳಗೆ ನುಗ್ಗಿದ ೫೮ ವರ್ಷದ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದ ಘಟನೆ ಗುರುವಾರ ನಡೆದಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.
ಗುಂಡಿನ ದಾಳಿ ನಡೆಸಿದ ನಂತರ ಗನ್ ಮ್ಯಾನ್ ತನಗೆ ತಾನೇ ಗುಂಡು ಹೊಡೆದುಕೊಂಡು ಸಾವನ್ನಪ್ಪಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಕಿಕ್ಕಿರಿದು ತುಂಬಿದ್ದ ಲೂಸಿಯಾನಾದ ಲಾಫಾಯೆಟ್ಟೆ ಥಿಯೇಟರ್ ನಲ್ಲಿ ಟ್ರೈನ್ ರೆಕ್ ಸಿನಿಮಾವನ್ನು ವೀಕ್ಷಿಸುತ್ತಿದ್ದ ವೇಳೆ 58 ವರ್ಷದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದರು. ನಂತರ ದಾಳಿಕೋರ ತನಗೆ ತಾನೆ ಗುಂಡಿಟ್ಟುಕೊಂಡು ಸವನ್ನಪ್ಪಿದ ಎಂದು ಲಫಾಯಟ್ಟೇ ಪೊಲೀಸ್ ಮುಖ್ಯಸ್ಥ ಜಿಮ್ ಕ್ರಾಫ್ಟ್ ಹೇಳಿದ್ದಾರೆ.
ಮೂರು ವರ್ಷದ ಹಿಂದೆ ಕೊಲೊರಾಡೊ ಸಿನಿಮಾ ಥಿಯೇಟರ್ ನಲ್ಲಿ ಬ್ಯಾಟ್ ಮ್ಯಾನ್ ಚಿತ್ರವನ್ನು ವೀಕ್ಷಿಸುತ್ತಿದ್ದ ವೇಳೆ ಗುಂಡಿನ ದಾಳಿ ನಡೆದ ಘಟನೆಯಲ್ಲಿ 12 ಮಂದಿ ಬಲಿಯಾಗಿದ್ದರು ಹಾಗೂ ಹಲವರು ಗಾಯಗೊಂದಿದ್ದರು.
ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ. ಗುಂಡಿನ ದಾಳಿ ನಡೆಸಿದವನ ಪರಿಚಯ ತಿಳಿದಿದೆ. ಆದರೆ ತನಿಖೆಯ ಹಿನ್ನೆಲೆಯಲ್ಲಿ ಆತನ ಕುರಿತು ವಿವರ, ಹೆಸರು ಬಹಿರಂಗಪಡಿಸುವುದಿಲ್ಲ ಎಂದು ಜಿಮ್ ಕ್ರಾಫ್ಟ್ ತಿಳಿಸಿದ್ದಾರೆ.
ಲೂಸಿಯಾನಾದ ಗವರ್ನರ್ ಬಾಬ್ಬಿ ಜಿಂದಾಲ್ 1.2 ಲಕ್ಷ ಜನಸಂಖ್ಯೆ ಇರುವ ಲಫಾಯಟ್ಟೆ ನಗರಕ್ಕೆ ಭೇಟಿ ನೀಡಿದ್ದಾರೆ. ಘಟನೆ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, 'ಗವರ್ನರ್ ಆಗಿ, ಒಬ್ಬ ತಂದೆಯಾಗಿ, ಗಂಡನಾಗಿ ಇಂಥ ವಿವೇಚನಾರಹಿತ ಹಿಂಸಾತ್ಮಕ ಕೃತ್ಯಗಳ ಬಗ್ಗೆ ಕೇಳಿದಾಗಲೆಲ್ಲ ನಮಗೆ ರೋಷ ಮತ್ತು ದುಃಖ ಒಮ್ಮೆಲೇ ಉಂಟಾಗುತ್ತದೆ' ಎಂದಿದ್ದಾರೆ.
ಅಮೆರಿಕದಲ್ಲಿ ಹೆಚ್ಚುತ್ತಿರುವ ಗನ್ ಸಂಸ್ಕೃತಿ ಇತ್ತೀಚೆಗೆ ಹಲವಾರು ಜೀವಗಳನ್ನು ಬಲಿ ತೆದೆಗುಕೊಂಡಿದ್ದು, ಅಧ್ಯಕ್ಷ ಬರಾಕ್ ಒಬಾಮ ಈ ಬಗ್ಗೆ ಹಲವಾರು ಬಾರಿ ತಮ್ಮ ಅಸಮಾಧಾನವನ್ನು ಹೊರಗೆಡಹಿದ್ದರು.