ನವದೆಹಲಿ : ಮ್ಯಾಗ್ಗಿ ತಯಾರಕ ಸಂಸ್ಥೆ ನೆಸ್ಲೆಯ ಸಂಕಟ ಇನ್ನಷ್ಟು ಹೆಚ್ಚಿದೆ. ಕಳಪೆ ಹಾಗೂ ಆರೋಗ್ಯಕ್ಕೆ ಹಾನಿಕರ ವಸ್ತುಗಳನ್ನು (ಮ್ಯಾಗ್ಗಿ ನೂಡಲ್ಸ್) ಕೋಟ್ಯಂತರ ಗ್ರಾಹಕರಿಗೆ ಮಾರಾಟ ಮಾಡಿದೆ ಎಂದು ಆಪಾದಿಸಿ ಗ್ರಾಹಕ ವ್ಯವಹಾರಗಳ ಇಲಾಖೆ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಸಂಸ್ಥೆ (ಎನ್.ಸಿ.ಡಿ.ಆರ್.ಸಿ)ಯಲ್ಲಿ ನೆಸ್ಲೆ ಕಂಪನಿಯಿಂದ 640 ಕೋಟಿ ರೂ. ಪರಿಹಾರ ಕೋರಿ ದೂರು ಅರ್ಜಿ ಸಲ್ಲಿಸಿದೆ.
ಅಲ್ಲದೆ, ದೂರಿನಲ್ಲಿ ಸೆಸ್ಲೆ ಕಂಪನಿಯು ಗ್ರಾಹಕರಿಗೆ ಜಾಹೀರಾತುಗಳಲ್ಲಿ ತಪ್ಪು ಮಾಹಿತಿ ನೀಡಿ ಅವರನ್ನು ತಪ್ಪುದಾರಿಗೆಳೆದಿದೆ ಮಾತ್ರವಲ್ಲ್, ಸಂಸ್ಥೆ ಕೇವಲ ಲಾಭಕ್ಕಾಗಿ ಅನ್ಯಾಯದ ವ್ಯಾಪಾರ ಮಾರ್ಗಗಳನ್ನು ಬಳಸಿದೆ ಎಂದು ಆಪಾದಿಸಲಾಗಿದೆ.
ಲಕ್ಷಾಂತರ ಗ್ರಾಹಕರ ಪರವಾಗಿ ದೂರು ಸಲ್ಲಿಸಿದ ಗ್ರಾಹಕ ವ್ಯವಹಾರಗಳ ಇಲಾಖೆ, ಸೆಸ್ಲೆ ಸಂಸ್ಥೆಯಿಂದ ಹಣವನ್ನು ಗ್ರಾಹಕ ರಕ್ಷಣಾ ಕಾಯ್ದೆಯಡಿ ಗ್ರಾಹಕ ಕಲ್ಯಾಣ ನಿಧಿಯಲ್ಲಿ ಠೇವಣಿ ಇಡಲು ಆದೇಶ ನೀಡುವಂತೆ ಎನ್.ಸಿ.ಡಿ.ಆರ್.ಸಿ ಯನ್ನು ವಿನಂತಿಸಿದೆ. ಅಲ್ಲದೆ ಈ ಹಣವನ್ನು ಠೇವಣಿ ಇಡುವವರೆಗೆ ನೆಸ್ಲೆ ಮೇಲೆ 18% ಬಡ್ದಿ ದರವನ್ನು ವಿಧಿಸಲೂ ಇಲಾಖೆ ಕೇಳಿಕೊಂಡಿದೆ.
ನೆಸ್ಲೆಯ ಅಸುರಕ್ಷಿತ ಆಹಾರ ಪದಾರ್ಥಗಳ ಬಗ್ಗೆ ಇನ್ನಷ್ಟು ಮಾಹಿತಿಗಳು ಬರಲಿದ್ದು, ಈ ಮೊತ್ತ ಇನ್ನೂ ಹೆಚ್ಚಾಗಬಹುದು ಎಂದು ಇಲಾಖೆ ತನ್ನ ದೂರಿನಲ್ಲಿ ತಿಳಿಸಿದೆ.
ದೂರಿನ ಬಗ್ಗೆ ಪ್ರತಿಕ್ರಿಯಿಸಿದ ನೆಸ್ಲೆ, ನಮಗೆ ಎನ್.ಸಿ.ಡಿ.ಆರ್.ಸಿ ನಲ್ಲಿ ಇಲಾಖೆ ಸಲ್ಲಿಸಿದ ದೂರಿನ ಬಗ್ಗೆ ಅಧಿಕೃತ ನೊಟೀಸ್ ಇನ್ನೂ ಬಂದಿಲ್ಲ. ನಮಗೆ ಈವರೆಗೆ ಇರುವ ಮಾಹಿತಿ ಕೇವಲ ಮಾಧ್ಯಮ ವರದಿಗಳನ್ನಾಧರಿಸಿದ್ದು. ಅಧಿಕೃತ ದಾಖಲೆಗಳು ಬಂದ ಮೇಲೆ ಈ ಬಗ್ಗೆ ನಾವು ಸಮಗ್ರವಾದ ಪ್ರತಿಕ್ರಿಯೆಯನ್ನು ನೀದಲು ಸಾಧ್ಯ' ಎಂದು ಹೇಳಿದೆ.
ತನ್ನ ದೂರಿನಲ್ಲಿ ವಿನಂತಿಸಿದ ದೊಡ್ಡ ಮೊತ್ತದ ಪರಿಹಾರವನ್ನು ಸಮರ್ಥಿಸಿಕೊಂಡ ಇಲಾಖೆ, ಮ್ಯಾಗ್ಗಿಯಲ್ಲಿ ಮಿತಿಗಿಂತ ಹೆಚ್ಚಿದ್ದ ಸೀಸ ಮತ್ತ್ ಎಮ್.ಎಸ್.ಜಿ. ಯಿಂದ ಮಕ್ಕಳ ಹಾಗೂ ಗರ್ಭಿಣಿಯರ ಆರೋಗ್ಯದ ಮೇಲೆ ಯಾವ ದುಷ್ಪರಿಣಾಮ ಬೀರುತ್ತದೆ ಎಂಬ ಸಂಶೋಧನಾ ವರದಿಯನ್ನು ಆಧರಿಸಿ ದೂರನ್ನು ಸಲ್ಲಿಸಲಾಗಿದೆ ಎಂದಿದೆ.
ತನ್ನ ಪದಾರ್ಥಗಳಲ್ಲಿ ಸೀಸದ ಅಂಶ ಅಪಾಯಕಾರಿ ಮಿತಿಯಲ್ಲಿ ಇದ್ದರೂ ನೆಸ್ಲೆ ಮ್ಯಾಗ್ಗಿಯನ್ನು ಜನಪ್ರಿಯಗೊಳಿಸಲು, 'ಆರೋಗ್ಯ ಖುಷಿಪಡುವಂಥದ್ದು' ಹಾಗೂ 'ರುಚಿಯೂ ಹೌದು, ಆರೋಗ್ಯಕರವೂ ಹೌದು' ಎಂಬ ತಪ್ಪು ಮಾಹಿತಿ ನೀಡುವ ಜಾಹೀರಾತುಗಳನ್ನು ಪ್ರಸಾರ ಮಾಡಿತ್ತು ಎಂದು ಇಲಾಖೆ ಹೇಳಿದೆ.