ಬೆಂಗಳೂರು : ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ನೀತಿಗಳನ್ನು ಖಂಡಿಸಿ 10 ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಕರೆ ನೀಡಿರುವ ಬಂದ್ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.
ಮುಷ್ಕರದ ಹಿನ್ನಲೆಯಲ್ಲಿ ಬ್ಯಾಂಕ್, ಅಂಚೆ ಕಚೇರಿ, ಇನ್ಸ್ಯೂರೆನ್ಸ್ ಕಚೆರಿಗಳು ಕಾರ್ಯನಿರ್ವಹಿಸುತ್ತಿಲ್ಲ. ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಕೆಲವೆಡೆ ಸರ್ಕಾರಿ ಶಾಲಾ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ.
ಬೆಂಗಳೂರಿನಲ್ಲಿ ಕೆ ಎಸ್ ಆರ್ ಟಿ ಸಿ ಮತ್ತು ಬಿಎಂಟಿಸಿ ಬಸ್ ಗಳು ಸಂಚರಿಸುತ್ತಿಲ್ಲ. ಬೆಂಗಳೂರಿನಲ್ಲಿ ದುಷ್ಕರ್ವಿುಗಳು 23 ಸರ್ಕಾರಿ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. 2 ಕೆ ಎಸ್ ಆರ್ ಟಿ ಸಿ, 9 ವೋಲ್ವೋ, 12 ಸಾಮಾನ್ಯ ಬಿಎಂಟಿಸಿ ಬಸ್ಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಕೆ.ಆರ್.ಸರ್ಕಲ್ ಮತ್ತು ಮಡಿವಾಳದ ಬಳಿ ಕಲ್ಲು ತೂರಾಟ ನಡೆಸಿದ್ದು ಬಸ್ಸಿನ ಗಾಜುಗಳಿಗೆ ಹಾನಿಯಾಗಿದೆ.
ಬೆಂಗಳೂರಿನಲ್ಲಿ ಆಟೋ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಬೆಳಗ್ಗೆ ಪರ ಊರುಗಳಿಂದ ಬಂದ ಪ್ರಯಾಣಿಕರು ಪರದಾಡಬೇಕಾಯಿತು. ಕೆಲವು ಆಟೋಗಳು ಸಂಚರಿಸಿದರೂ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ ವರದಿಯಾಗಿದೆ. ಆದರೆ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ಗಳ ಸಂಚಾರ ಎಂದಿನಂತೆ ಇದೆ.
ಮುಷ್ಕರಕ್ಕೆ ಹೋಟೆಲ್ ಸಂಘ ಮತ್ತು ಚಿತ್ರೋದ್ಯಮ ತಮ್ಮ ಬೆಂಬಲವಿಲ್ಲ ಎಂದು ಹೇಳಿದೆ.