ನವದೆಹಲಿ : ಜೋರ್ಡಾನ್, ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ದೇಶಗಳಿಗೆ ಆರು ದಿನಗಳ ಭೇಟಿಗಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶನಿವಾರ ನವದೆಹಲಿಯಿಂದ ಪ್ರಯಾಣ ಬೆಳೆಸಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈ ರಾಷ್ಟ್ರಗಳಿಗೆ ಭೇಟಿ ನೀಡುತ್ತಿರುವ ಮೊತ್ತ ಮೊದಲ ಭಾರತದ ಮುಖಂಡರಾಗಿದ್ದಾರೆ.
ಪಯಣಕ್ಕೆ ಮುನ್ನ ಔಪಚಾರಿಕ ಬೀಳ್ಕೊಡುಗೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮತ್ತು ಮೂರೂ ಪಡೆಗಳ ಮುಖ್ಯಸ್ಥರು ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.
ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಮೊದಲು ಜೋರ್ಡಾನ್ಗೆ ಭೇಟಿ ನೀಡಿ ಇರಾಕ್ನ ಮೊಸುಲ್ ಪಟ್ಟಣದಲ್ಲಿ ಐಸಿಸ್ ಉಗ್ರಗಾಮಿಗಳು ಹಿಡಿದಿಟ್ಟುಕೊಂಡಿರುವ 39 ಮಂದಿ ಭಾರತೀಯರ ಬಿಡುಗಡೆ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಸಹಕರಿಸುವಂತೆ ಅವರು ಮನವಿ ಮಾಡಲಿದ್ದಾರೆ.
ಎರಡು ದಿನಗಳ ಜೋರ್ಡಾನ್ ಭೇಟಿಯ ಬಳಿಕ ರಾಷ್ಟ್ರಪತಿಯವರು ಅಕ್ಟೋಬರ್ 12ರಂದು ಪ್ಯಾಲೆಸ್ತೇನ್ ಗೆ ಮತ್ತು ಬಳಿಕ ಅಕ್ಟೋಬರ್ 13ರಂದು ಇಸ್ರೇಲ್ಗೆ ಭೇಟಿ ನೀಡಲಿದ್ದಾರೆ.
ಜೋರ್ಡಾನ್ ಭೇಟಿ ಕಾಲದಲ್ಲಿ ಉಭಯ ರಾಷ್ಟ್ರಗಳ ನಡುವಣ ವ್ಯಾಪಾರ ವೃದ್ಧಿ ಅವಕಾಶಗಳ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರ್ಚಚಿಸಲಿದ್ದಾರೆ. ರಾಜತಾಂತ್ರಿಕ ಬಾಂಧವ್ಯ ಸ್ಥಾಪಿಸಿದಂದಿನಿಂದ ಕಳೆದ 65 ವರ್ಷಗಳ ಅವಧಿಯಲ್ಲಿ ಈ ರಾಷ್ಟ್ರಗಳಿಗೆ ಪ್ರಯಾಣ ಮಾಡಿದ ಮೊದಲ ಭಾರತೀಯ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪ್ರಣಬ್ ಮುಖರ್ಜಿ ಪಾತ್ರರಾಗಲಿದ್ದಾರೆ. 1988ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರು ಜೋರ್ಡಾನ್ಗೆ ಭೇಟಿ ನೀಡಿದ್ದರು.