ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಂಚನೆ ಮತ್ತು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಡಿಸೆಂಬರ್ 19ರಂದು ಮಧ್ಯಾಹ್ನ 3ಗಂಟೆಗೆ ಖುದ್ದು ಹಾಜರಾಗುವಂತೆ ದೆಹಲಿಯ ವಿಚಾರಣಾ ನ್ಯಾಯಾಲಯ ಮಂಗಳವಾರ ಆದೇಶ ನೀಡಿದೆ.
ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸೋನಿಯಾ ಗಾಂಧಿ, ಇದೊಂದು ರಾಜಕೀಯ ಒಳಸಂಚು ಎಂದು ಬಿಜೆಪಿ ನೇತೃತ್ವದ ಸರ್ಕಾರದ ಮೇಲೆ ಆರೋಪ ಮಾಡಿದರು. ನಾನೇಕೆ ಹೆದರಬೇಕು? ನಾನು ಇಂದಿರಾ ಗಾಂಧಿ ಅವರ ಸೊಸೆ, ಯಾರಿಗೂ ಹೆದರುವುದಿಲ್ಲ ಎಂದು ಹೇಳಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಂಚನೆ ಮತ್ತು ದುರುಪಯೋಗ ಪ್ರಕರಣದಲ್ಲಿ ಹೊರಡಿಸಲಾಗಿದ್ದ ಸಮನ್ಸ್ ಪ್ರಶ್ನಿಸಿ ಸೋನಿಯಾ ಮತ್ತು ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ದಿಲ್ಲಿ ಹೈಕೋರ್ಟ್ ವಜಾ ಮಾಡಿ, ವಿಚಾರಣಾ ನ್ಯಾಯಾಲಯಕ್ಕೆ ಮಂಗಳವಾರ ಹಾಜರಾಗಲೇಬೇಕೆಂದು ಸೂಚಿಸಿತ್ತು.
ಇದರಿಂದಾಗಿ ಮಂಗಳವಾರ ವಿಚಾರಣಾ ನ್ಯಾಯಾಲಯದ ಮುಂದೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಐವರು ಆರೋಪಿಗಳು ಹಾಜರಾಗಲೇಬೇಕಿತ್ತು. ಆದರೆ ಸೋನಿಯಾ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ನಮ್ಮ ಕಕ್ಷಿದಾರರು ವಿಚಾರಣೆಗೆ ಹಾಜರಾಗಲು ಸಿದ್ದರಾಗಿದ್ದಾರೆ. ಆದರೆ ಅವರು ಇಂದು ಕಲಾಪದಲ್ಲಿ ಭಾಗವಹಿಸುತ್ತಿರುವುದರಿಂದ ನಾಳೆಗೆ ವಿಚಾರಣೆ ಮುಂದೂಡಬೇಕೆಂದು ಮನವಿ ಮಾಡಿಕೊಂಡಿದ್ದರು. ಸಿಂಘ್ವಿ ಮನವಿ ಹಿನ್ನೆಲೆಯಲ್ಲಿ ಸೋನಿಯಾ, ರಾಹುಲ್ ಡಿ.19ರಂದು ಖುದ್ದು ಹಾಜರಾಗುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಸ್ಥಾಪಿಸಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಆಸ್ತಿಯನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಐವರು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎನ್ನುವ ಆರೋಪವಿದೆ.