ನವದೆಹಲಿ : ಅಕ್ರಮ ಆಸ್ತಿ ಗಳಿಕೆ ಹಾಗೂ ಲಂಚ ನೀಡಿ ಉನ್ನತ ಹುದ್ದೆ ಗಿಟ್ಟಿಸಿದ ಆರೋಪ ಸಂಬಂಧ ಸೇವೆಯಲ್ಲಿರುವ ಇಬ್ಬರು ಮೇಜರ್ ಜನರಲ್ಗಳ ವಿರುದ್ಧ ಸಿಬಿಐ ತನಿಖೆ ನಡೆಸಲು ರಕ್ಷಣಾ ಸಚಿವಾಲಯ ಹೇಳಿದೆ.
ಗುರುವಾರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಇಬ್ಬರು ಮೇಜರ್ ಜನರಲ್ಗಳ ವಿರುದ್ಧ ಕೇಳಿಬಂದಿರುವ ಆರೋಪದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾವುದೇ ವಿಧದ ಭೃಷ್ಟಾಚಾರವನ್ನೂ ಸರ್ಕಾರ ಸಹಿಸುವುದಿಲ್ಲ ಎನ್ನುವ ನೀತಿಯ ಪ್ರಕಾರ ಪ್ರಕರಣವನ್ನು ಸಿಬಿಐ ತನಿಖೆಗೆವಹಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಲೆಫ್ಟಿನಂಟ್ ಜನರಲ್ ಹುದ್ದೆಗೆ ಬಡ್ತಿ ಪಡೆಯಲು ಈ ಇಬ್ಬರೂ ಅಧಿಕಾರಿಗಳು ಲಂಚ ನೀಡಿದ್ದಾರೆ ಎಂಬ ಆರೋಪಗಳು ರಕ್ಷಣಾ ಸಚಿವಾಲಯಕ್ಕೆ ಬಂದಿದ್ದವು. ಈ ಹಿನ್ನಲೆಯಲ್ಲಿ ತನಿಖೆಗೆ ಆದೇಶಿಸಿದ್ದಾರೆ.