ನವದೆಹಲಿ : ರೈಲ್ವೇ ಸಚಿವಾಲಯ ಪ್ರಯಾಣಿಕರ ಅನುಕೂಲತೆಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.
ಇನ್ನು ಮುಂದೆ ರೈಲಿನಲ್ಲಿ ಪ್ರಯಾಣ ಮಾಡುವಾಗ 25 ಬಗೆಯ ಚಹಾ ಸವಿಯಬಹುದು ಮತ್ತು ರೈಲ್ವೇ ಒದಗಿಸುವ ಬೆಡ್ಶೀಟ್ ಮತ್ತು ದಿಂಬನ್ನು ಮನೆಗೊಯ್ಯಬಹುದಾಗಿದೆ.
ಐಆರ್ಸಿಟಿಸಿ ಖಾಸಗಿ ಸಂಸ್ಥೆಯೊಂದಿಗೆ ಪ್ರಯಾಣಿಕರಿಗೆ ವೈವಿಧ್ಯಮಯ ಚಹಾ ಸರಬರಾಜು ಮಾಡಲು ಚಾಯೊಸ್ ಎಂಬ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಚಹಾವನ್ನು ನೀವು ನಿಮ್ಮ ಮೊಬೈಲ್ ನಿಂದಲೇ ಆರ್ಡರ್ ಮಾಡಬಹುದು. ಇದಕ್ಕಾಗಿಯೇ ಪ್ರತ್ಯೇಕ ಆ್ಯಪ್ ಪ್ರಾರಂಭಿಸಲಾಗಿದೆ.
ಸಾಂಪ್ರದಾಯಿಕವಾಗಿ ತಯಾರಿಸುವ ದೇಶಿ ಚಹಾ, ಅದ್ರಕ್ ತುಳಸಿ ಚಹಾ, ಜೇನು ತುಪ್ಪ, ಶುಂಠಿ ಮತ್ತು ನಿಂಬೆ ರಸ ಹಾಕಿ ತಯಾರಿಸುವ ಡಯಟ್ ಚಹಾ ಹೀಗೆ ನಾನಾ ರೀತಿಯ ಚಹಾಗಳನ್ನು ಐಆರ್ಸಿಟಿಸಿ ಒದಗಿಸಲಿದೆ. ಚಹಾಕ್ಕೆ ಆರ್ಡರ್ ನೀಡುವ ಸಲುವಾಗಿ ಪ್ರತ್ಯೇಕವಾದ ಆ್ಯಪ್ ಪ್ರಾರಂಭಿಸಲಾಗಿದೆ.
ಚಾಯೊಸ್ ಎಂಬ ಸರಣಿ ಕೆಫೆಗಳನ್ನು ಹೊಂದಿದ್ದು, ರೈಲುಗಳಲ್ಲಿ ವೈವಿಧ್ಯಮಯ ಚಹಾಗಳನ್ನು ಪೂರೈಸಲಿದೆ. ಚಹಾದ ಜೊತೆ ವಡಾ ಪಾವ್, ಬನ್ ಮಸ್ಕಾ, ಸಮೋಸಾ ಮುಂತಾದ ಸ್ನಾಕ್ಸ್ ಗಳು ಸಹ ಸಿಗಲಿದೆ.
ರೈಲ್ವೇ ಸಚಿವ ಸುರೇಶ್ ಪ್ರಭು ದಿಂಬು ಮತ್ತು ಬೆಡ್ಶೀಟ್ ಮಾರುವ ರೈಲ್ವೇಯ ಯೋಜನೆಗೆ ಚೆನ್ನೈಯಲ್ಲಿ ಚಾಲನೆ ನೀಡಿದ್ದಾರೆ. ಪ್ರಯಾಣಿಕರು ನಿರ್ದಿಷ್ಟ ಹಣ ಪಾವತಿಸಿ ರೈಲ್ವೇ ಒದಗಿಸುವ ಬೆಡ್ಶೀಟ್ ಮತ್ತು ದಿಂಬನ್ನು ಮನೆಗೊಯ್ಯುಬಹುದಾಗಿದೆ. ಒಂದು ದಿಂಬು ಮತ್ತು ಎರಡು ಕಾಟನ್ ಬೆಡ್ಶೀಟ್ ಇರುವ ಪ್ಯಾಕ್ಗೆ 140 ರೂ., ಒಂದು ಹೊದಿಕೆ ಮಾತ್ರ ಇರುವ ಪ್ಯಾಕ್ಗೆ 110 ರೂಪಾಯಿ. ಆರಂಭದಲ್ಲಿ ಚೆನ್ನೈ ಸೆಂಟ್ರಲ್ ನಿಲ್ದಾಣದಲ್ಲಿ ಮಾತ್ರ ಈ ಸೌಲಭ್ಯ ಜಾರಿಯಾಗಿದೆ. ಸದ್ಯದಲ್ಲೇ ಎಲ್ಲ ಪ್ರಮುಖ ನಿಲ್ದಾಣಗಳಿಗೆ ಇದನ್ನು ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.