ಬೆಂಗಳೂರು : ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡುತ್ತಿದ್ದಂತೆ ಅವರ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಈ ಮೂಲಕ ಬಿಎಸ್ವೈ ಕಟ್ಟಾ ಅಭಿಮಾನಿಗಳ ಯುಗಾದಿ ಸಂಭ್ರಮ ಇಮ್ಮಡಿಯಾಗಿದೆ.
ಶಿವಮೊಗ್ಗದ ವಿನೋಬಾ ನಗರದ ಯಡಿಯೂರಪ್ಪ ಅವರ ನಿವಾಸದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಿಸಲಾಯಿತು. ಪುತ್ರ ವಿಜಯೇಂದ್ರ ,ಪುತ್ರಿ ಅರುಣಾದೇವಿ ಮತ್ತು ನೂರಾರು ಯಡಿಯೂರಪ್ಪ ಅಭಿಮಾನಿಗಳು ಉಪಸ್ಥಿತರಿದ್ದರು.
ಮಲ್ಲೇಶ್ವರಂನ ಬಿಜೆಪಿ ಕಚೇರಿ ಎದುರು ಕಾರ್ಯಕರ್ತರು ಪಟಾಕಿ ಸಿಡಿಸಿ, ಕುಣಿದು-ಕುಪ್ಪಳಿಸಿದರು. ರಾಜ್ಯದ ಎಲ್ಲೆಡೆ ಯಡಿಯೂರಪ್ಪ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಕೆಲವೆಡೆ 'ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜಯವಾಗಲಿ'... ಎಂಬ ಜಯಘೋಷಗಳು ಮೊಳಗಿವೆ.
ಈ ನಡುವೆ ರಾಜ್ಯಾಧ್ಯಕ್ಷ ಸ್ಥಾನ ಸಿಗುತ್ತಿದ್ದಂತೆ ದೆಹಲಿಯಲ್ಲಿ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಸರ್ಕಾರವನ್ನು ಕಿತ್ತೂಗೆಯುವುದು ನನ್ನ ಮೊದಲ ಗುರಿ ಎಂದರು . ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ ಬಿಜೆಪಿಯನ್ನು ಅಧಿಕಾರಕ್ಕೇರಿಸುತ್ತೇನೆ. ನನಗೆ ಹುದ್ದೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ನನ್ನ ಧನ್ಯವಾದಗಳು ಎಂದರು.