ನಾಸಾ : ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ತಂಡ ಸಿದ್ಧಪಡಿಸಿದ ಬಾಹ್ಯಾಕಾಶ ನೌಕೆಗೆ ಹೋಲುವ ಸಾಧನ ನೌಕೆ ಸಿಎಸ್ಟಿ-100 ಲೋಕಾರ್ಪಣೆಗೆ ಕಾಯುತ್ತಿದೆ. ಸುನಿತಾ ಅವರನ್ನೊಳಗೊಂಡ ತಂಡ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಈಗಾಗಲೇ ಈ ಕುರಿತು ಮಾಹಿತಿ ನೀಡಿದ್ದು, ಈ ಅನುಕರಣೀಯ ಸಾಧನ ನೌಕೆ ಸುರಕ್ಷಿತವಾಗಿವೆ ಎಂದು ತಿಳಿಸಿದೆ.
ಇದನ್ನು ಸುಲಭವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸುವಂತೆ ವಿನ್ಯಾಸಗೊಳಿಸಲಾಗಿದ್ದು, ಮುಂದಿನ ಪೀಳಿಗೆಯ ಅಧ್ಯಯನಕ್ಕಾಗಿ ಸಿದ್ಧಪಡಿಸಲಾದ ತರಬೇತಿ ಬಾಹ್ಯಾಕಾಶ ನೌಕೆಯಾಗಿದೆ.
ನಾಸಾದ ವಾಣಿಜ್ಯ ಸಿಬ್ಬಂದಿ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ವಿಶ್ವದ ಪ್ರತಿಷ್ಠಿತ ವಿಮಾನ ತಯಾರಿಕ ಕಂಪನಿ ಬೋಯಿಂಗ್ ಹಾಗೂ ಬಿಗೇಲೊ ಏರೋಸ್ಪೇಸ್ ಜಂಟಿಯಾಗಿ ಈ ಬಾಹ್ಯಾಕಾಶ ನೌಕೆಯನ್ನು ಸಿದ್ಧಪಡಿಸಿದೆ.
ತರಬೇತಿ ಬಾಹ್ಯಾಕಾಶ ನೌಕೆ ಸಿದ್ಧಪಡಿಸುವ ಯೋಜನಾ ಕಾರ್ಯಕ್ಕೆ ನಾಸಾ ಸುನಿತಾ ವಿಲಿಯಮ್ಸ್ ಜತೆ ಬೋಯ್, ಬಾಬ್ ಬೆಂಕನ್ ಹಾಗೂ ಡೌಗ್ ಹರ್ಲಿ ಎಂಬ ಗಗನಯಾತ್ರಿಗಳನ್ನು ಆಯ್ಕೆ
ಮಾಡಿತ್ತು.
ಈ ಬಗ್ಗೆ ಮಾತನಾಡಿರುವ ಸುನಿತಾ ವಿಲಿಯಮ್ಸ್, ಅನುಕರಣೀಯ ಸಾಧನಗಳೆಲ್ಲವೂ ಟಚ್ ಸ್ಕ್ರೀನ್ಗಳಿಂದ ಕೂಡಿವೆ. ತರಬೇತಿ ಅಭ್ಯರ್ಥಿಗಳಿಗೆ ಸಾಕಷ್ಟು ಮಾಹಿತಿ ನೀಡಬಲ್ಲ ಬಹುಮುಖ ಸಾಮರ್ಥ್ಯ ಇದರಲ್ಲಿದೆ ಎಂದು ತಿಳಿಸಿದ್ದಾರೆ.