ನವದೆಹಲಿ : ಸಂಸದರು ತಮ್ಮ ವೇತನವನ್ನು ಶೇ.100ರಷ್ಟು ಹೆಚ್ಚಿಸಿಕೊಳ್ಳುವ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಸದರ ಮಾಸಿಕ ವೇತನ ಶೇ.100ರಷ್ಟು ಹೆಚ್ಚಿಸುವ ಸಂಸದೀಯ ಮಂಡಳಿಯ ಶಿಫಾರಸು ಇದೀಗ ಪ್ರಧಾನಿ ಮೋದಿ ಅವರ ಅನುಮೋದನೆಗೆ ಕಾಯುತ್ತಿದೆ. ಸಂಸದರು ತಮ್ಮ ವೇತನವನ್ನು ತಾವೇ ಶೇ.100ರಷ್ಟು ಹೆಚ್ಚಿಸಿಕೊಳ್ಳುವುದು ಸದ್ಭಾವನೆಯ ಕ್ರಮವಲ್ಲ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಸಂಸದೀಯ ಮಂಡಳಿಯ ಶಿಫಾರಸಿನ ಪ್ರಕಾರ ಸಂಸತ್ ಸದಸ್ಯರ ಪ್ರಸ್ತಿತ ಮಾಸಿಕ ವೇತನ 50,000 ರೂ.ಗಳಿಂದ ಒಂದು ಲಕ್ಷ ರೂ.ಗಳಿಗೆ ಏರಲಿದೆ. ಇದನ್ನು ಒಪ್ಪಿಕೊಂಡಲ್ಲಿ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ 250 ಕೋಟಿ ರೂ ಗಳ ಹೊರೆಯಾಗಲಿದೆ.
ಸಂಸದರ ಕ್ಷೇತ್ರೀಯ ಭತ್ಯೆ ಹಾಗೂ ಆಪ್ತ ಸಹಾಯಕ ಭತ್ಯೆಯನ್ನು ಸಂಸದೀಯ ಮಂಡಳಿ 45,000 ರೂ.ಗಳಿಂದ 90,000 ರೂ.ಗಳಿಗೆ ಏರಿಸಲು ಶಿಫಾರಸು ಮಾಡಿದೆ. ಅಲ್ಲದೇ ಸಂಸದರಿಗೆ ಸಿಗುವ ಪೀಠೊಪಕರಣ ಭತ್ಯೆ 1.50 ಲಕ್ಷ ರೂ.ಗೆ ಏರಲಿದೆ. ಇನ್ನು ಸಂಸದೀಯ ಮಂಡಳಿಯ ಶಿಫಾರಸಿನ ಪ್ರಕಾರ ಎಲ್ಲ ಸಂಸದರಿಗೆ ತಿಂಗಳ 1,700 ರೂ. ಮೌಲ್ಯದ ಬಿ.ಎಸ್.ಎನ್.ಎಲ್ ಬ್ರಾಡ್ ಬ್ಯಾಂಡ್ ಕನೆಕ್ಷನ್ ಕೂಡ ಸಿಗಲಿದೆ.
ಒಟ್ಟಿನಲ್ಲಿ ಸಂಸದರು ತಮ್ಮ ವೇತನವನ್ನು ತಾವೇ ಹೆಚ್ಚಿಸಿಕೊಳ್ಳುವ ಕ್ರಮಕ್ಕೆ ಪ್ರಧಾನಿ ಮೋದಿ ವಿರೋಧ ವ್ಯಕ್ತಪಡಿಸಿರುವುದು ಸಂಸದರ ಕನಸಿಗೆ ಭಾರೀ ಹಿನ್ನಡೆಯಾದಂತಾಗಿದೆ.