ನವದೆಹಲಿ : ನ್ಯಾಶನಲ್ ಎಲಿಜಿಬಿಲಿಟಿ ಎಂಟ್ರೆನ್ಸ್ ಟೆಸ್ಟ್ (ನೀಟ್) ಮೂಲಕವೇ ವಿದ್ಯಾರ್ಥಿಗಳು ಮೆಡಿಕಲ್, ದಂತವೈದ್ಯಕೀಯ ಕೋರ್ಸ್ಗೆ ಪ್ರವೇಶ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ರಾಜ್ಯ ಸರ್ಕಾರಗಳು ನಡೆಸುವ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಗೆ ಕೂಡ ಕಾನೂನು ಮಾನ್ಯತೆ ಇಲ್ಲ ಎಂದು ತಿಳಿಸಿದೆ. ಈ ಮೂಲಕ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಪರೀಕ್ಷೆ ನಡೆಸುವ ಕುರಿತು ಇದ್ದ ಎಲ್ಲ ಗೊಂದಲಗಳಿಗೆ ತೆರೆ ಎಳೆದಂತಾಗಿದೆ.
ರಾಜ್ಯಗಳು ನಡೆಸುವ ಪ್ರತ್ಯೇಕ ಪ್ರವೇಶ ಪರೀಕ್ಷೆಗೆ ಅವಕಾಶ ಕೋರಿ ಕರ್ನಾಟಕ ಸಹಿತ ವಿವಿಧ ರಾಜ್ಯ ಸರಕಾರಗಳು ಮತ್ತು ಅಲ್ಪಸಂಖ್ಯಾಕ ಶಿಕ್ಷಣ ಸಂಸ್ಥೆಗಳು ಮಾಡಿದ್ದ ಮನವಿ ತಿರಸ್ಕರಿಸಿದ ನ್ಯಾ.ಎ.ಆರ್.ದವೆ, ನ್ಯಾ.ಶಿವಕೀರ್ತಿ ಸಿಂಗ್ ಮತ್ತು ನ್ಯಾ.ಆದರ್ಶ ಕುಮಾರ್ ಗೋಯೆಲ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಈ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುವ ಕಾಮೆಡ್-ಕೆಯಂತಹ ಪ್ರವೇಶ ಪರೀಕ್ಷೆಗೆ ಅನುಮತಿ ನಿರಾಕರಿಸಿದ್ದ ಸುಪ್ರೀಂ ಕೋರ್ಟ್, ಈಗ ರಾಜ್ಯಗಳು ನಡೆಸುವ ಸಿಇಟಿಗೂ ಅನುಮತಿ ನಿರಾಕರಿಸಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ಸಹಿತ ದೇಶದ ವಿವಿಧ ರಾಜ್ಯಗಳ ಲಕ್ಷಾಂತರ ವಿದ್ಯಾರ್ಥಿಗಳು, ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಜು. 24ರಂದು ನಡೆಯುವ ಎರಡನೇ ಸುತ್ತಿನ ನೀಟ್ ಬರೆಯುವುದು ಅನಿವಾರ್ಯವಾಗಿದೆ.
ಇದೇ ವೇಳೆ ಅಗತ್ಯವೆಂದು ಕಂಡುಬಂದರೆ ಜುಲೈ 24ರಂದು ನಡೆಸಲು ಉದ್ದೇಶಿಸಿರುವ ನೀಟ್-2 ಪರೀಕ್ಷೆಯ ದಿನಾಂಕವನ್ನು ಕೇಂದ್ರ ಸರ್ಕಾರ ಬದಲಾಯಿಸಬಹುದು. ಆದರೆ ಎರಡೂ ಪರೀಕ್ಷೆಗಳ ಫಲಿತಾಂಶವನ್ನು ಆಗಸ್ಟ್ 17ಕ್ಕೆ ಏಕಕಾಲಕ್ಕೆ ಪ್ರಕಟಿಸಬೇಕು. ಇದರಿಂದಾಗಿ ಸೆ.30ರೊಳಗೆ ಎಲ್ಲಾ ಪ್ರವೇಶಾತಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.