ಬೆಂಗಳೂರು : ರಾಜ್ಯದ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ, ಬರ ಪರಿಹಾರ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಬರ ನಿರ್ವಹಣೆಯ ಬಗ್ಗೆ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ರಾಜ್ಯ ಬಿಜೆಪಿ ನಾಯಕರು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಮಾಡಿದೆ.
ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಮುಖಂಡರ ನಿಯೋಗ, ರಾಜ್ಯದಲ್ಲಿ ಪ್ರವಾಸ ನಡೆಸಿ ಸಿದ್ದಪಡಿಸಿರುವ ಬರ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಿತು.
ಈ ವರದಿಯಲ್ಲಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ತಲೆದೋರಿರುವ ವಸ್ತುಸ್ಥಿತಿಯನ್ನು ಬಿಜೆಪಿ ವಿವರಿಸಿದ್ದು, ಎಲ್ಲೆಡೆ ಕುಡಿಯುವ ನೀರಿನ ಹಾಹಾಕಾರ, ಜಾನುವಾರುಗಳಿಗೆ ಮೇವಿನ ಕೊರತೆ, ವಿದ್ಯುತ್ ಅಭಾವವಿದ್ದು, ಗ್ರಾಮೀಣ ಜನತೆ ಅದರಲ್ಲೂ ರೈತಾಪಿ ವರ್ಗ ಅಸಹಾಯಕ ಸ್ಥಿತಿಯಲ್ಲಿ ಇರುವುದನ್ನು ವಿವರಿಸಲಾಗಿದೆ.ರಾಜ್ಯದ ಬೀದರ್, ಕಲ್ಬುರ್ಗಿ, ರಾಯಚೂರು, ಚಿತ್ರದುರ್ಗ, ತುಮಕೂರು ಸೇರಿದಂತೆ ಬರ ಪೀಡಿತ ಜಿಲ್ಲೆಗಳ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ಸಲ್ಲಿಸಲಾಗಿದೆ.
ರಾಜ್ಯ ಸರ್ಕಾರ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುತ್ತಿಲ್ಲ. ಕೂಡಲೇ ತಾವು ಮಧ್ಯ ಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ಬರ ಪರಿಸ್ಥಿತಿ ನಿರ್ವಹಣೆ ಬಗ್ಗೆ ಸ್ಪಷ್ಟ ನಿರ್ದೇಶನ ನೀಡುವಂತೆ ಬಿಜೆಪಿ ನಾಯಕರು ಮನವಿ ಮಾಡಿದರು.
ರಾಜ್ಯಪಾಲರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ರೈತರ ಸಾಲ ಮನ್ನಾ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಬೇಕು ಎಂಬ ಮನವಿಯನ್ನೂ ಬಿಜೆಪಿ ಮಾಡಿದೆ ಎಂದು ತಿಳಿಸಿದ್ದಾರೆ.