ನವದೆಹಲಿ : ಕೆಲ ದಿನಗಳ ಹಿಂದಷ್ಟೇ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ದರ ಈಗ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ದರ 83 ಪೈಸೆ ಮತ್ತು ಡೀಸೆಲ್ ದರ 1.26 ರೂ. ಏರಿಕೆಯಾಗಿದೆ.
ಭಾರತಕ್ಕೆ ಕಚ್ಚಾ ತೈಲ ರವಾನೆ ಮಾಡುತ್ತಿದ್ದ ಇರಾನ್ ನ ತೈಲೋತ್ಪನ್ನ ಸಂಸ್ಥೆಗಳು ರವಾನೆ ಶುಲ್ಕ ವಿನಾಯಿತಿ ತೆರವುಗೊಳಿಸಿದ ಹಿನ್ನಲೆಯಲ್ಲಿ ಭಾರತೀಯ ತೈಲೋತ್ಪನ್ನ ಸಂಸ್ಥೆಗಳೇ ರವಾನೆ ಶುಲ್ಕ ಪಾವತಿ ಮಾಡಬೇಕಿದೆ.
ಅಲ್ಲದೇ ಪೆಟ್ರೋಲ್ ಶುಲ್ಕವನ್ನು ಅಮೆರಿಕ ಡಾಲರ್ ದರದಲ್ಲಿ ನೀಡುವಂತೆ ತೈಲ ಕಂಪನಿಗಳು ಭಾರತೀಯ ಸಂಸ್ಕರಣಾ ಕಂಪನಿಗಳಿಗೆ ಸೂಚಿಸಿದ್ದವು. ಇದು ಪೆಟ್ರೋಲ್ ದರ ಏರಿಕೆಗೆ ಕಾರಣವಾಗಿದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಕಂಡಿರುವುದು ಕೂಡ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಮೇ 1ರಂದು ಪೆಟ್ರೋಲ್ 1.6 ರೂ., ಡೀಸೆಲ್ 2.94 ರೂ. ಏರಿಕೆಯಾಗಿತ್ತು. ಇದೀಗ ಮತ್ತೆ 2ನೇ ಬಾರಿಗೆ ಪೆಟ್ರೋಲ್ ದರ ಏರಿಕೆಯಾಗಿದ್ದು, ಪರಿಷ್ಕೃತ ದರ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.