ಶ್ರೀನಗರ : ಜಮ್ಮು-ಕಾಶ್ಮೀರದ ಗಡಿಯಲ್ಲಿ ಕೆಲ ದಿನಗಳಿಂದ ಉಗ್ರರ ಒಳ ನುಸುಳುವಿಕೆ ಹೆಚ್ಚಾಗಿದ್ದು, ಗಡಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಉಗ್ರರ ವಿರುದ್ಧ ಮುಂಜಾನೆ ನಡೆದ ಕಾರ್ಯಾಚರಣೆಯಲ್ಲು ಸೈನಿಕರು ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ.
ಉತ್ತರ ಕಾಶ್ಮೀರದ ಬರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ನ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಲಾಚಿಪೋರ ಅರಣ್ಯಪ್ರದೇಶದಲ್ಲಿ ಉಗ್ರರು ನುಸುಳುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಗಡಿ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆಗಿಳಿದರು. ಇಬ್ಬರು ಉಗ್ರರನ್ನು ಹತ್ಯೆಗಯ್ಯುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ.
ಉರಿ ಸೆಕ್ಟರ್ ಪ್ರದೇಶದಲ್ಲಿ ಇನ್ನಷ್ಟು ಉಗ್ರರು ಅಡಗಿರುವ ಶಂಕೆ ಇರುವ ಹಿನ್ನೆಲೆಯಲ್ಲಿ ಶೋಧಕಾರ್ಯ ಮುಂದುವರಿಸಲಾಗಿದೆ. ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಶನಿವಾರ ಸಂಜೆ ಪಾಕಿಸ್ತಾನದ ಲಷ್ಕರ್ ಫಿದಾಯಿನ್ ಸಂಘಟನೆಗೆ ಸೇರಿದ ಉಗ್ರರು ಏಕಾಏಕಿ ಯೋಧರ ಮೇಲೆ ದಾಳಿ ನಡೆಸಿದ್ದರ ಪರಿಣಾಮ 8 ಯೋಧರು ಹುತಾತ್ಮರಾಗಿದ್ದರು. ಈ ಘಟನೆಯ ಬಳಿಕ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿತ್ತು. ಅಲ್ಲದೇ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ಈ ನಡುವೆ ಉಗ್ರ ದಾಳಿಯಲ್ಲಿ ಹುತಾತ್ಮರಾದ 8 ಸೈನಿಕರ ಆತ್ಮಕ್ಕೆ ಶಾಂತಿಕೋರಿ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ತಮ್ಮ ಪ್ರಾಣ ತ್ಯಾಗ ಮಾಡಿ ದೇಶ ರಕ್ಷಣೆಗೆಮುಂದಾದ ಸೈನಿಕರ ಬಲಿದಾನಕ್ಕೆ ನಾನು ಸೆಲ್ಯೂಟ್ ಹೇಳುತ್ತೇನೆ .ಮೃತ ಯೋಧರ ಕುಟುಂಬಗಳೊಂದಿಗೆ ನಾವಿದ್ದೇವೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.