ಹನೋಯ್ : ರಕ್ಷಣಾ ಕ್ಷೇತ್ರ, ಮಾಹಿತಿ ತಂತ್ರಜ್ನಾನ, ಸೈಬರ್ ಸೆಕ್ಯೂರಿಟಿ, ಆರೋಗ್ಯ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ವಿಯೆಟ್ನಾಂ ನಡುವೆ 12 ಮಹತ್ವದ ಒಪ್ಪಂದಗಳಿಗೆ ಸಹಿಹಾಕಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ವಿಯೆಟ್ನಾಂ ರಾಜಧಾನಿ ಹನೋಯ್ ನಲ್ಲಿ ವಿಯೆಟ್ನಾಂ ಪ್ರಧಾನಿ ಗುಯೆನ್ ಕ್ಸುವಾನ್ ಅವರೊಂದಿಗೆ ಈ 12 ಮಹತ್ವದ ಒಡಂಬಡಿಕೆಗಳಿಗೆ ಸಹಿ ಹಾಕಿದ್ದಾರೆ.
ಈ ವೇಳೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ. ವಿಯೆಟ್ನಾಂ ರಕ್ಷಣಾ ಕ್ಷೇತ್ರಕ್ಕೆ 500 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವುದಾಗಿ ಈ ಸಂದರ್ಭದಲ್ಲಿ ಮೋದಿ ಘೋಷಿಸಿದರು. ವಿಯೆಟ್ನಾಂ ಜೊತೆಗಿನ ನಮ್ಮ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಹೇಳಿದರು
ವಿಯೆಟ್ನಾಂನಲ್ಲಿ ಕಾರ್ಯಗತಗೊಳ್ಳುತ್ತಿರುವ ಭಾರತದ ಯೋಜನೆಗಳು ಮತ್ತು ಹೂಡಿಕೆಗೆ ನೆರವಾಗಲು 2020ರ ವೇಳೆಗೆ 15 ಶತಕೋಟಿ ಡಾಲರ್ ದ್ವಿಪಕ್ಷೀಯ ವ್ಯಾಪಾರ-ವಹಿವಾಟು ಗುರಿಯನ್ನು ಮೋದಿ ನಿಗದಿಗೊಳಿಸಿದ್ದಾರೆ. ಅಲ್ಲದೇ ಸಾಫ್ಟ್ವೇರ್ ಪಾರ್ಕ್ ಸ್ಥಾಪನೆಗಾಗಿ ಭಾರತ 5 ದಶಲಕ್ಷ ಡಾಲರ್ ಧನಸಹಾಯ ಮಾಡಲಿದೆ ಎಂದು ಪ್ರಧಾನಿಯವರು ತಿಳಿಸಿದ್ದಾರೆ.
ವಿಯೆಟ್ನಾಂನಲ್ಲಿ ಆಧುನಿಕ ಕೃಷಿ, ಉದ್ಯಮಶೀಲತೆ ಮತ್ತು ಅನ್ವೇಷಣೆ ಹಾಗೂ ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ದಿ ಕ್ಷೇತ್ರಲ್ಲಿ ವಿಯೆಟ್ನಾಂಗೆ ಅಗತ್ಯವಾಗಿರುವ ಎಲ್ಲ ಸಹಕಾರ ಮತ್ತು ಬೆಂಬಲವನ್ನು ಭಾರತ ನೀಡಲಿದೆ ಎಂದು ಮೋದಿ ಹೇಳಿದ್ದಾರೆ.
ಇದಕ್ಕೂ ಮೊದಲು ವಿಯೆಟ್ನಾಂನ ಹನಾಯ್ ನಲ್ಲಿರುವ ಅಧ್ಯಕ್ಷರ ಅರಮನೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಅದ್ದೂರಿಯಾಗಿ ಸ್ವಾಗತ ನೀಡಲಾಯಿತು.