ಇಟಾನಗರ : ಹಠಾತ್ ವಿದ್ಯಮಾನವೊಂದರಲ್ಲಿ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ. 43 ಶಾಸಕರೊಂದಿಗೆ ಬಿಜೆಪಿ ಮಿತ್ರ ಪಕ್ಷ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶ (ಪಿಪಿಎ)ಗೆ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಶಾಸಕರಲ್ಲಿ ನಬಮ್ ತುಕಿ ಹೊರತುಪಡಿಸಿ ಸಿಎಂ ಪೆಮಾ ಖಂಡು ಮತ್ತು 43 ಶಾಸಕರು ಕಾಂಗ್ರೆಸ್ ತೊರೆದಿದ್ದಾರೆ. ಸಾಮೂಹಿಕ ಗುಳೆಯಿಂದಾಗಿ ಕಾಂಗ್ರೆಸ್ನಲ್ಲಿ ದೊಡ್ಡಮಟ್ಟದ ಬಿಕ್ಕಟ್ಟು ಎದುರಾಗಿದೆ. ಪಿಪಿಎ ಪಕ್ಷದೊಂದಿಗೆ ಕಾಂಗ್ರೆಸ್ ಪಕ್ಷವನ್ನು ವಿಲೀನಗೊಳಿಸುತ್ತಿರುವುದಾಗಿ ಖಂಡು ಅವರು, ಸಭಾಪತಿ ವಾಂಗ್ಕಿ ಲೊವಾಂಗ್ ಅವರಿಗೆ ಹೇಳಿದ್ದಾರೆ.
ಅರುಣಾಚಲ ವಿಧಾನಸಭೆಯಲ್ಲಿ ಒಟ್ಟು 60 ಸದಸ್ಯರಿದ್ದು, ಕಾಂಗ್ರೆಸ್ 45 ಸ್ಥಾನಗಳನ್ನು ಹೊಂದಿತ್ತು. ಬಿಜೆಪಿ ಮಿತ್ರಪಕ್ಷದ 11 ಸದಸ್ಯರಿದ್ದರು. ಈಗ ಸಾಮೂಹಿಕ ಗುಳೆಯಿಂದಾಗಿ ಬಿಜೆಪಿಗೆ ವರದಾನವಾಗಿದ್ದು, ಕಾಂಗ್ರೆಸ್ ಅರುಣಾಚಲ ಪ್ರದೇಶದಲ್ಲಿ ಹೇಳ ಹೆಸರಿಲ್ಲದಂತೆ ಅವನತಿ ಕಂಡಿದೆ.
ಜುಲೈ ನಲ್ಲಿ ಅಂದಿನ ಮುಖ್ಯಮಂತ್ರಿ ನಬಮ್ ತುಕಿ ವಿರುದ್ಧ ಕಾಂಗ್ರೆಸ್ ಸದಸ್ಯರು ಬಂಡಾಯವೆದ್ದಿದ್ದಕ್ಕೆ ಅವರನ್ನು ಪದಚ್ಯುತಿಗೊಳಿಸಿ ಖಂಡು ಅವರನ್ನು ರಾಜ್ಯ ಸರ್ಕಾರದ ಮುಖ್ಯಸ್ಥನನ್ನಾಗಿ ನೇಮಿಸಲಾಗಿತ್ತು.