ವಾಷಿಂಗ್ಟನ್ : ಪಾಕಿಸ್ತಾನ ಭಯೋತ್ಪಾದನೆಗೆ ಉತ್ತೇಜನ ನೀಡುವ ರಾಷ್ಟ್ರವೆಂದು ಪರಿಗಣಿಸುವ ಮಸೂದೆ( ಪಾಕಿಸ್ತಾನ್ ಸ್ಟೇಟ್ ಸ್ಪಾನ್ಸರ್ ಆಫ್ ಟೆರರಿಸಂ ಡೆಸಿಗ್ನೇಷನ್ ಆಕ್ಟ್ ಹೆಚ್ ಆರ್ 6069) ನ್ನು ಅಮೆರಿಕದ ಪ್ರಮುಖ ಸಂಸದರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಮಂಡಿಸಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗವುಂಟಾಗಿದೆ.
ಪಾಕಿಸ್ತಾನದ ಇಬ್ಬಗೆ ನೀತಿಗೆ ಕಡಿವಾಣ ಹಾಕಲು ಅಮೆರಿಕಾಗೆ ಇದು ಸಕಾಲ ಎಂದು ಸಂಸದರು ಒತ್ತಾಯಿಸಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆ ವಿರುದ್ಧದ ಹೋರಾಟದ ವಿಚಾರದಲ್ಲಿ ಜಾಗತಿಕ ಸಮುದಾಯಕ್ಕೆ ನಂಬಿಕೆ ದ್ರೋಹ ಮಾಡಿದೆ. ಆದ್ದರಿಂದ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ಆರ್ಥಿಕ ನೆರವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ" ಎಂದು ಭಯೋತ್ಪಾದನೆ ನಿಗ್ರಹ ಸಮಿತಿಯ ಅಧ್ಯಕ್ಷರೂ ಆಗಿರುವ ಅಮೆರಿಕ ಸಂಸದ ಟೆಡ್ ಪೋ ತಿಳಿಸಿದ್ದಾರೆ.
ಪಾಕಿಸ್ತಾನವನ್ನು ನಂಬಿಕಸ್ಥ ರಾಷ್ಟ್ರ ಅಲ್ಲ ಎಂದಿರುವ ಟೆಡ್ ಪೋ, ಅಮೆರಿಕದ ಶತೃಗಳಿಗೆ ಹಲವು ವರ್ಷಗಳ ಕಾಲ ಪಾಕಿಸ್ತಾನ ಆಶ್ರಯ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಓಸಮಾ ಬಿನ್ ಲಾಡೆನ್ ಗೆ ಆಶ್ರಯ ನೀಡುವುದರಿಂದ ಹಿಡಿದು ಹಖಾನಿ ಭಯೋತ್ಪಾದನೆ ಜಾಲದೊಂದಿಗೆ ಅದು ಸಂಬಂಧ ಹೊಂದಿದೆ. ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಪಾಕಿಸ್ತಾನ ಯಾರ ಪರವಾಗಿದೆ ಎಂಬುದಕ್ಕೆ ಸಾಕಷ್ಟು ಸಾಕ್ಷಿ ಇದೆ ಎಂದು ಟೆಡ್ ಪೊಯಿ ಹೇಳಿದ್ದಾರೆ.
ಬರಾಕ್ ಒಬಮಾ ಆಡಳಿತ ಅಧಿಕೃತವಾಗಿ ಉತ್ತರಿಸಬೇಕು ಎಂಬುದನ್ನು ಈ ಮಸೂದೆ ಬಯಸಿದೆ. ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಪಾಕಿಸ್ತಾನವು ಬೆಂಬಲ ನೀಡಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಈ ವಿಧೇಯಕ ಮಂಡನೆಯಾದ 90 ದಿನಗಳ ಒಳಗೆ ಅಧ್ಯಕ್ಷರು ವಿವರಣೆ ನೀಡಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ.