ಬೆಂಗಳೂರು : ತಮಿಳುನಾಡಿಗೆ ನೀರು ಬಿಡದಿರಲು ದೃಢ ನಿರ್ಧಾರ ತೆಗೆದುಕೊಳ್ಳಿ. ರಾಜ್ಯದಲ್ಲಿ ಮೊದಲು ಕುಡಿಯುವ ನೀರಿಗೆ ಆದ್ಯತೆಕೊಡಿ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಕಾವೇರಿ ವಿಚಾರದಲ್ಲಿ ನೀಡಿರುವ ತೀರ್ಪು ನ್ಯಾಯಯುತವಾಗಿಲ್ಲ. ಮುಖ್ಯಮಂತ್ರಿ ರಾಜೀನಾಮೆ ಕೊಡುವುದು ಬೇಡ. ಆದರೆ ತಮಿಳುನಾಡಿಗೆ ನೀರು ಒಂದು ಹನಿ ಬಿಡುವುದಿಲ್ಲ ಎಂಬ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಈಗಾಗಲೇ ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದ್ದೇನೆ. ತಮಿಳುನಾಡಿನ ಸಾಂಬಾ ಬೆಳೆಗಿಂತ ನಮಗೆ ಕಡುಯುವ ನೀರು ಅತ್ಯಂತ ಅಗತ್ಯ. ನೀವು ದಿಟ್ಟ ನಿರ್ಧಾರ ತೆಗೆದುಕೊಳ್ಳಿ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಭರವೆ ನೀಡಿರುವುದಾಗಿ ತಿಳಿಸಿದರು.
ಸುಪ್ರೀಂಕೋರ್ಟ್ ತನ್ನ ವ್ಯಾಪ್ತಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶಿಸಿದೆ. ಇದನ್ನು ಕೂಡಲೇ ಪ್ರಧಾನಿ ನರೇಂದ್ರ ಮೋದಿಯವರು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು. ನೀರಿನ ವಿಚಾರವಾಗಿ ಈ ಹಿಂದೆ ನಾನು ಮೂರು ಬಾರಿ ರಾಜೀನಾಮೆ ಕೊಟ್ಟಿದ್ದೆ. ನಾಳೆಯೇ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ನಾನು ಮಾಜಿ ಪ್ರಧಾನಿ, ಹಿರಿಯ ರಾಜಕಾರಣಿ ಎಂಬ ಉದ್ದೇಶದಿಂದ ಹೀಗೆ ಹೇಳುತ್ತಿಲ್ಲ. ನಾನೊಬ್ಬ ಸಾಮಾನ್ಯ ಪ್ರಜೆಯಾಗಿಯೇ ಹೀಗೆ ಹೇಳುತ್ತಿದ್ದೇನೆ ಎಂದರು. ನಮ್ಮ ಜಲಾಶಯದ ಸ್ಥಿತಿಗತಿ ನೋಡಿ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಂತೆ ಕಾಣುತ್ತಿಲ್ಲ. ಜನರಿಗೆ ಕುಡಿಯುವ ನೀರು ಮುಖ್ಯವೋ ಅಲ್ಲಿನ ಬೆಳೆಗೆ ನೀರು ಮುಖ್ಯವೋ ಎಂದು ದೇವೇಗೌಡರು ತೀರ್ಪಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 9 ವರ್ಷದಿಂದ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ನಾವು ಸಲ್ಲಿಸಿದ್ದ ಮೇಲ್ಮನವಿ ಇನ್ನು ವಿಚಾರಣೆಗೆ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆಯ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.