Untitled Document
Sign Up | Login    
ರಾಮಾಯಣ
ದಶಾವತಾರದ ಕಥೆಗಳು
ಶ್ರೀರಾಮ

ಇಡೀ ವಿಶ್ವದಲ್ಲಿಯೇ ಪ್ರಸಿದ್ಧವಾಗಿರುವ ರಾಮಾಯಣ ಮಹಾಭಾರತಗಳು 'ಪುರಾಣೇತಿಹಾಸ’ ಎಂದು ಕರೆಯಲ್ಪಟ್ಟಿದೆ. ಇತಿಹಾಸದ ಆಧಾರದ ಮೇಲೆ, ಐತಿಹ್ಯವನ್ನು ಒಳಗೊಂಡು, ಪುರಾಣದ ರಮ್ಯತೆಯನ್ನು ಮೆರೆಯುವ ರಾಮಾಯಣ ಮಹಾಭಾರತಗಳ ಬೃಹತ್‌ಕಥಾನಕ "ಮಹಾಕಾವ್ಯ’ವಾಗಿ ಮೈದಳೆದು ಹರಿದಿದೆ.

ಅಂತಹ ಮಹಾಕಾವ್ಯಗಳಲ್ಲಿ ಆದಿಕವಿ ವಾಲ್ಮೀಕಿಯು 'ರಾಮಾಯಣ'ವನ್ನೂ, ಹದಿನೆಂಟು ಪುರಾಣಗಳ ಕರ್ತೃವಾದ ವೇದವ್ಯಾಸರು 'ಮಹಾಭಾರತ'ವನ್ನೂ ರಚಿಸಿದ್ದಾರೆ.

ರಾಮಾಯಣದಲ್ಲಿ ಶ್ರೀರಾಮನ ಚರಿತೆಯೂ, ಮಹಾಭಾರತದಲ್ಲಿ ಶ್ರೀಕೃಷ್ಣ್ನನ ಲೀಲೆಯೂ ಮುಖ್ಯ ಕಥಾವಸ್ತುವಾಗಿದ್ದು ಈ ಈರ್ವರು ಮಹಾಪುರುಷರೂ ಶ್ರೀಮನ್ನಾರಾಯಣನ ಅವತಾರ ಪುರುಷರಾಗಿದ್ದಾರೆ. ಶ್ರೀರಾಮಚಂದ್ರನು ತನ್ನ ನಡೆ ನುಡಿಯಿಂದ 'ಮಹಾಮಾನವ' (ಅಥವಾ ಅತಿಮಾನವ) ನೆಂದೂ, ಶ್ರೀಕೃಷ್ಣನು 'ದೇವಮಾನವ' ನೆಂದೂ ಪ್ರಥಿತರಾಗಿದ್ದಾರೆ.

ಹಾಗಾದರೆ ಶ್ರೀಮನ್ನಾರಾಯಣನು ಬೇರೆ ಬೇರೆ ರೂಪಿನಲ್ಲಿ ಅವತಾರವೆತ್ತಲು ಕಾರಣವೇನು? ಅಂತಹ ಇತರ ಯಾವ ಯಾವ ಅವತಾರಗಳನ್ನು ಎತ್ತಿದ್ದಾನೆ? ಅವುಗಳ ಮಹತ್ವವೇನು? ಅವುಗಳ ಕತೆಯೇನು? ಎಂಬುದನ್ನು ತಿಳಿದುಕೊಳ್ಳಬೇಕಾದದ್ದು ಜಿಜ್ಞಾಸುಗಳ ಲಕ್ಷಣವಾಗಿದೆ.

ಈ ಅವತಾರಗಳು ಮತ್ತು ಆಯಾ ಕಾಲಘಟ್ಟಗಳಲ್ಲಿ ನಡೆದ ಘಟನಾವಳಿಗಳು, ಲೋಕ ಹಿತಕಾರ್ಯಗಳು ಮುಂತಾದವುಗಳ ಕುರಿತು ನೈಮಿಷಾರಣ್ಯದಲ್ಲಿ ಸೂತಮಹಾಪುರಾಣಿಕರು, ಶೌನಕಾದಿ ಋಷಿಗಳಿಗೆ ಸಾದ್ಯಂತವಾಗಿ ವಿವರಿಸಿ ಹೇಳಿದರು. ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ ಅವರ ಕುತೂಹಲವನ್ನು ತಣಿಸಿದರು. ಭಗವಂತನ ಅವತಾರಗಳು ಅಸಂಖ್ಯಾತ! ಅವುಗಳಲ್ಲಿ ಮುಖ್ಯವಾದ 'ದಶಾವತಾರ'ಗಳ ಮಹಿಮೆಯನ್ನು ಕುರಿತು ಹಸ್ತಿನಾವತಿಯ ರಾಜನಾದ ಧರ್ಮರಾಜನು ಸಹಜ ಕುತೂಹಲದಿಂದ ಮಾರ್ಕಾಂಡೇಯ ಮುನಿಗಳ ಹತ್ತಿರ ಕೇಳಿದಾಗ ಅವರು, ಯಾವ ಸುತಮಹಾಪುರಾಣಿಕರು ಶೌನಕಾದಿ ಋಷಿಗಳಿಗೆ ಹೇಳಿದ್ದರೋ ಅದೇ ದಶಾವತಾರದ ಕಥೆಯನ್ನೂ ಮಹಿಮೆಯನ್ನೂ ವಿಸ್ತಾರವಾಗಿ ವರ್ಣಿಸಿದರು.

ಶ್ರೀಕೃಷ್ಣಾ

ಇವು ಭಾಗವತ ಮಹಾಪುರಾಣ, ಸ್ಕಂದ ಪುರಾಣ ಮೊದಲಾದ ಪುರಾಣಗಳಲ್ಲಿ ವಿಶದವಾಗಿ ವರ್ಣಿತವಾಗಿವೆ.
ದಶಾವತಾರಗಳು:

"ಮತ್ಸ್ಯ ಕೂರ್ಮ ವರಾಹಶ್ಚ ನಾರಸಿಂಹಶ್ಚ ವಾಮನಃ ||
ರಾಮೋರಾಮಶ್ಚ ಕೃಷ್ಣಶ್ಚ ಬುದ್ಧಕಲ್ಕಿ ನಮೋನಮಃ ||

ಮತ್ಸ್ಯಕೂರ್ಮನು ಆ ವರಾಹನು | ನಾರಸಿಂಹನು ವಾಮನ |
ಪರಶುರಾಮನು ರಾಮಚಂದ್ರನು ಕೃಷ್ಣಬುದ್ಧನು ಕಲ್ಕಿಯು ||
ಎಂಬ ಹತ್ತವತಾರವೆತ್ತಿದ ಹರಿಯು ದುಷ್ಟರ ತರಿದನು
ಪೊರೆದ ಶಿಷ್ಟರ ಕರುಣದಿಂದಲಿ ಆತಗೊಲವಿನ ಪ್ರಣತಿಯು||

ಹೀಗೆ ದಶಾವತಾರಗಳನ್ನು ಸ್ಮರಿಸಿ ಪ್ರಾತಃ ಸಂಧ್ಯಾಕಾಲಗಳಲ್ಲಿ ನಮಸ್ಕಾರ ಮಾಡಲಾಗುತ್ತದೆ.
1. ಮತ್ಸ್ಯಾವತಾರ 2. ಕೂರ್ಮಾವತಾರ, 3. ವರಾಹಾವತಾರ, 4. ನರಸಿಂಹಾವತಾರ 5. ವಾಮನಾವತಾರ, 6. ಪರಶುರಾಮಾವತಾರ, 7. ರಾಮಾವತಾರ 8. ಕೃಷ್ಣಾವತಾರ 9. ಬೌದ್ಧಾವತಾರ 10. ಕಲ್ಕಿ ಅವತಾರ - ಹೀಗೆ ಪ್ರಮುಖವಾದ 10 ಅವತಾರಗಳು 'ದಶಾವತಾರ' ಎಂದು ಪ್ರಖ್ಯಾತವಾಗಿವೆ.

(ಮುಂದುವರಿಯುವುದು)

Writer Details

ವನರಾಗ ಶರ್ಮಾ

© bangalorewaves. All rights reserved. Developed And Managed by Rishi Systems P. Limited