ನವದೆಹಲಿ : ಗಡಿಪ್ರದೇಶ ಲಡಾಕ್ ಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಆ.12ರಂದು ಎರಡು ಜಲವಿದ್ಯುತ್ ಯೋಜನೆಗಳನ್ನು ಉಧ್ಘಾಟಿಸಲಿದ್ದಾರೆ.
ಇದೇ ವೇಳೆ ಸಿಯಾಚಿನ್ ಗೂ ಮೋದಿ ಭೇಟಿ ನೀಡಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಲಡಾಕ್, ಸಿಯಾಚಿನ್ ಗೆ ಒಂದು ದಿನ ಮುಂಚಿತವಾಗಿ ತೆರಳಿರುವ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಅಲ್ಲಿನ ಸೇನಾ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿ ಭದ್ರತೆಯ ಕುರಿತು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸೇನೆಯ ಬಲವರ್ಧನೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮಾಹಿತಿ ಪಡೆದಿದ್ದಾರೆ.
2005ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಳಿಕ ಸಿಯಾಚಿನ್ ಗೆ ಭೇಟಿ ನೀಡುತ್ತಿರುವ 2ನೇ ಪ್ರಧಾನಿಯಾಗಲಿದ್ದಾರೆ. ಸಿಯಾಚಿನ್ ಪ್ರಪಂಚದ ಅತಿ ಎತ್ತರದ ಹಾಗೂ ಅತಿ ಶೀತಲ ಯುದ್ಧಭೂಮಿಯಾಗಿದೆ.
ಸಿಯಾಚಿನ್ ಭೇಟಿಯ ವೇಳೆ ಮೋದಿ ಅವರು ಸೇನಾಪಡೆಯನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಪ್ರಧಾನಿಯಾದ ಬಳಿಕ ಪ್ರಥಮ ಬಾರಿಗೆ ನರೇಂದ್ರ ಮೋದಿ ಲಡಾಕ್ ಗೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಮೋದಿ ಅವರನ್ನು ಸೇನಾ ಮುಖ್ಯಸ್ಥರು ಬರಮಾಡಿಕೊಳ್ಳಲಿದ್ದಾರೆ.