ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೂ ಮುನ್ನ ನೀಡಿದ್ದ ಅಚ್ಚೆ ದಿನ್ ಭರವಸೆ ಕೊನೆಗೂ ಈಡೇರಿದೆ.
ಆ.29ರಂದು ಬಿಡುಗಡೆಯಾದ ಜಿಡಿಪಿ ಮಾಹಿತಿ ಪ್ರಸಕ್ತ ಸಾಲಿನ ಪ್ರಥಮ ತ್ರೈಮಾಸಿಕದಲ್ಲಿ ಶೇ.5.7ರಷ್ಟು ಏರಿಕೆ ಕಂಡಿದೆ. ಕಳೆದ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇ.4.6ರಷ್ಟಿತ್ತು. ಮೋದಿ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಜಿಡಿಪಿ ಶೇ.5.7ಕ್ಕೆ ಜಿಗಿತ ಕಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಚುನಾವಣೆ ಗೆಲುವು ದೇಶದ ಆರ್ಥಿಕ ಕ್ಷೇತ್ರದ ಚೇತರಿಕೆಗೆ ಸಹಕಾರಿಯಾಗಿದೆ. ಮೋದಿ ಪ್ರಧಾನಿಯಾದ ಬಳಿಕ ಕೈಗೊಂಡ ಕೆಲವು ನಿರ್ಧಾರಗಳು ದೇಶದ ಆರ್ಥಿಕತೆ ಬೆಳವಣಿಗೆಗೆ ಪೂರಕವಾಗಿದೆ.
ಸ್ಥಿರ ತೆರಿಗೆ ನೀತಿ, ಶೀಘ್ರಗತಿಯಲ್ಲಿ ಅಭಿವೃದ್ಧಿ ಪರ ಯೋಜನೆಗಳಿಗೆ ಅಗತ್ಯವಿರುವ ಪರವಾನಗಿಗಳ ಮಂಜೂರಾತಿ ಹಾಗೂ ಎನ್.ಡಿ.ಎ ಸರ್ಕಾರದ ಹೂಡಿಕೆ ಸ್ನೇಹಿ ನೀತಿಗಳಿಂದಾಗಿ ಹೂಡಿಕೆದಾರರಿಗೆ ಅನುಕೂಲಕರ ವಾತಾವರಣ ನಿರ್ಮಿಸಿದ್ದರ ಪರಿಣಾಮ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ದೇಶದ ಆರ್ಥಿಕತೆಯಲ್ಲಿ ಗಮನಾರ್ಹ ಸುಧಾರಣೆ ತರಲು ಸಾಧ್ಯವಾಗಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಕಳೆದ 2 ವರ್ಷಗಳಿಂದ ದೇಶದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿತ್ತು. ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಉತ್ಪಾದನಾ ವಲಯ ಹಾಗೂ ಮೈನಿಂಗ್ ಕ್ಷೇತ್ರಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದರ ಪರಿಣಾಮ ಜಿಡಿಪಿಯಲ್ಲಿ ಕ್ಷಿಪ್ರ ಬೆಳೆವಣಿಗೆ ಕಾಣಲು ಸಾಧ್ಯವಾಗಿದೆ ಎಂದು ಅರ್ಥಶಾಸ್ತ್ರಜ್ನರ ಅಭಿಪ್ರಾಯವಾಗಿದೆ. ಉತ್ಪಾದನಾ ವಲಯ ದೇಶದ ಆರ್ಥಿಕತೆಗೆ ಶೇ.15ರಷ್ಟು ಕೊಡುಗೆ ನೀಡಲಿದ್ದು ಪ್ರಸಕ್ತ ಸಾಲಿನಲ್ಲಿ ಶೇ.1.4ರಿಂದ ಶೇ.3.5ರಷ್ಟು ಏರಿಕೆ ಕಂಡಿದೆ. ಗಣಿ ಕ್ಷೇತ್ರದಲ್ಲಿ ಶೇ.0.4ರಿಂದ ಶೇ.2.1ರಷ್ಟು ಏರಿಕೆಯಾಗಿದೆ. ಇದೇ ವೇಳೆ ಕೃಷಿ ಕ್ಷೇತ್ರದಲ್ಲಿ ಕಡಿಮೆ ಪ್ರಗತಿ ಸಾಧಿಸಿದ್ದು ಶೇ.6.3ರಿದ್ದ ಅಭಿವೃದ್ಧಿ ಶೇ.3.8ಕ್ಕೆ ಕುಸಿದಿದ್ದು ಕ್ಷೀಣಿಸಿದ ಮುಂಗಾರು ಇದಕ್ಕೆ ಕಾರಣ ಎನ್ನಲಾಗಿದೆ.
ಮೋದಿ ಅಧಿಕರದ ಪ್ರಥಮ ಮೂರು ತಿಂಗಳಲ್ಲಿ ಜಿಡಿಪಿ ಅಭಿವೃದ್ಧಿ ಸಾಧಿಸಿದ್ದು ಅಚ್ಚೆ ದಿನ್ ಕೊನೆಗೂ ಬಂದಿದೆ ಎಂದೇ ಬಣ್ಣಿಸಲಾಗುತ್ತಿದೆ. ಹೂಡಿಕೆಗೆ ಅನುಕೂಲವಾಗುವ ರೀತಿಯಲ್ಲಿ ಶೀಘ್ರಗತಿಯಲ್ಲಿ ಪರವಾನಗಿ ನೀಡುವುದು ಸೇರಿದಂತೆ ಮೋದಿ ಸರ್ಕಾರ ಅರ್ಥ ವ್ಯವಸ್ಥೆಗೆ ಪುನಶ್ಚೇತನ ನೀಡುವ ಕೆಲಸ ಮಾಡಿದ್ದರೂ ರಚನಾತ್ಮಕ ಸುಧಾರಣೆಗಳ ಬಗ್ಗೆ ಗಮನ ಹರಿಸಿದರೆ ಮುಂದಿನ ದಿನಗಳಲ್ಲಿ ಅರ್ಥವ್ಯವಸ್ಥೆ ಮತ್ತಷ್ಟು ವೃದ್ಧಿಯಾಗಲಿದೆ ಎಂದು ಅರ್ಥಶಾಸ್ತ್ರಜ್ನರು ಅಭಿಪ್ರಾಯಪಟ್ಟಿದ್ದಾರೆ.
ರಚನಾನ್ಮಕ ಸುಧಾರಣೆ ತರಲು ಕೆಲವು ಕಠಿಣ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಮೋದಿ ಸರ್ಕಾರಕ್ಕೆ ಅಡ್ಡಿ ಉಂಟಾಗುವ ಸಾಧ್ಯತೆ ಇದೆ. ಆದರೂ ಇದೀಗ ವಿಮಾ, ರಕ್ಷಣಾ ಕ್ಷೇತ್ರಗಳಲ್ಲಿ ಎಫ್.ಡಿ.ಐ ಮಿತಿ ಹೆಚ್ಚಿಸಿರುವುದೂ ಸೇರಿದಂತೆ ಮೋದಿ ಸರ್ಕಾರದ ಹಲವು ನಿರ್ಧಾರಗಳಿಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದೆ.
ಒಟ್ಟಾರೆ ಜಿಡಿಪಿ ದರ ಏರಿಕೆಯಿಂದಾಗಿ ಅಚ್ಚೆ ದಿನ್ ಬಂದಿದೆ ಎಂದೇ ಮಾಧ್ಯಮಗಳಲ್ಲಿ ಬಣ್ಣಿಸಲಾಗುತ್ತಿದೆ.