ಟೋಕಿಯೋ : ಜಪಾನ್ ಪ್ರವಾಸದಲಿರುವ ಪ್ರಧಾನಿ ನರೇಂದ್ರ ಮೋದಿ, ವಾರಾಣಸಿಯನ್ನು ಜಪಾನ್ ನ ದೇಗುಲ ನಗರಿ ಕ್ಯೋಟೋ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಸ್ಮಾರ್ಟ್ ಸಿಟಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಕ್ಯೋಟೋದ ಅನುಭವವನ್ನು ಬಳಸಿಕೊಂಡು ಭಾರತದ ಪುಣ್ಯ ಕ್ಷೇತ್ರವಾಗಿರುವ ವಾರಾಣಸಿಯನ್ನು ಅಭಿವೃದ್ಧಿಪಡಿಸುವುದು ಈ ಒಪ್ಪಂದದ ಉದ್ದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ನೇತೃತ್ವದಲ್ಲಿ ಜಪಾನ್ ನಲ್ಲಿರುವ ಭಾರತೀಯ ರಾಯಭಾರಿ ದೀಪಾ ವಾಧ್ವಾ ಹಾಗೂ ಕ್ಯೋಟೋ ನಗರದ ಮೇಯರ್ ಡಿಸಾಕು ಕಡೊಕವಾ ಅವರು ಒಪ್ಪಂದಕ್ಕೆ ಪರಸ್ಪರ ಸಹಿಹಾಕಿದರು.
ಪರಂಪರೆಯ ರಕ್ಷಣೆ, ನಗರದ ಆಧುನೀಕರಣ, ಕಲೆ, ಸಂಸ್ಕೃತಿ, ಶಿಕ್ಷಣ ವಿಚಾರದಲ್ಲಿ ಪರಸ್ಪರ ಸಹಕಾರ ನೀಡುವ ಅಂಶ ಈ ಒಪ್ಪಂದದಲ್ಲಿ ಅಡಕವಾಗಿದೆ ಎಂದು ವಿದೇಶಾಂಗ ಇಲಾಖೆ ವಜ್ತಾರ ಸಯೈದ್ ಅಕ್ಬರುದ್ದೀನ್ ತಿಳಿಸಿದ್ದಾರೆ.
ಆ.31ರಂದು ಪ್ರಧಾನಿ ಮೋದಿ, ಜಪಾನ್ ನ ಪ್ರಸಿದ್ಧ ಬೌದ್ಧ ದೇವಾಲಯ ಕಿನಕುಕು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸೆ.1ರಂದು ಪ್ರಧಾನಿ ಮೋದಿ, ಶಿಂಜೋ ಅಬೆಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಕಾರ್ಯಕ್ರಮ ನಿಗದಿಯಾಗಿದೆ. ರಕ್ಷಣೆ, ನಾಗರಿಕ ಅಣು ವಲಯ, ವಿರಳ ಲೋಹ ಘಟಕಗಳನ್ನು ಜಂಟಿಯಾಗಿ ಆರಂಭಿಸುವ ಸಂಬಂಧ ಉಭಯ ದೇಶಗಳು ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆಯಿದೆ.