ಹುಬ್ಬಳ್ಳಿ : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭ್ರಷ್ಟ, ಅನೈತಕ ರಾಜಕಾರಣದ ರೂಪ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಅಕ್ರಮಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಿ ವಿಚಾರಣೆ ನಡೆಸಬೇಕು. ವಿಶೇಷ ನ್ಯಾಯಾಲಯ ಸ್ಥಾಪನೆಗೆ ಒತ್ತಾಯಿಸಿ ಅಭಿಯಾನ ನಡೆಸಲಾಗುವುದು. ಈ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ಡಿ.ಕೆ.ಶಿವಕುಮಾರ್ ಅವರ ಭ್ರಷ್ಟಾಚಾರ, ಅಕ್ರಮಗಳ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಒಂದು ವೇಳೆ ಕ್ರಮ ಕೈಗೊಳ್ಳದಿದ್ದಲ್ಲಿ ಬಿಜೆಪಿ ಸರ್ಕಾರಕ್ಕಾದ ಸ್ಥಿತಿಯೇ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಗೂ ಆಗಲಿದೆ ಎಂದು ಎಚ್ಚರಿಸಿದ್ದಾರೆ.
ಜಯಲಲಿತಾ ಅವರ ಅಕ್ರಮ ಅಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ ವಿಚಾರಣೆ ನಡೆಸಲಾಯಿತು, ಅದೇ ರೀತಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣಗಳ ಬಗ್ಗೆಯೂ ವಿಚಾರಣೆ ನಡೆಯಬೇಕು ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನ ಸ್ವಾಗತಾರ್ಹ ಎಂದ ಹಿರೇಮಠ, ಮೊದಲು ಮೋದಿಯವರು ತಮ್ಮ ಸಚಿವ ಸಂಪುಟದಲ್ಲಿರುವ ಭ್ರಷ್ಟ ಸಚಿವರನ್ನು ಹೊರಹಾಕಲಿ ಎಂದರು. ಬಿಜೆಪಿ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ರೈಲ್ವೆ ಸಚಿವ ಸದಾನಂದಗೌಡ ಅವರನ್ನು ಮೊದಲು ಕೈಬಿಡಬೇಕು. ಮೊದಲು ಅಂತರಂಗ ಶುದ್ಧಿಯಾಗಬೇಕು, ಬಳಿಕ ಬಹಿರಂಗ ಶುದ್ಧಿ. ಅಂದಾಗ ಸ್ವಚ್ಛ ಭಾರತ ಅಭಿಯಾನಕ್ಕೆ ಅರ್ಥಬರುತ್ತದೆ ಎಂದಿದ್ದಾರೆ.