ಬೆಂಗಳೂರು : 'ಕಾರ್ತಿಕ್ ಗೌಡ'- ಮೈತ್ರಿಯಾ ಗೌಡ ವಿವಾಹ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರ ಕುಟುಂಬಸ್ಥರ ದೂರವಾಣಿ ಸಂಭಾಷಣೆಯನ್ನು ಕದ್ದಾಲಿಸಿದ್ದು ಪೊಲೀಸರ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಒಂದೆಡೆ ಪೊಲೀಸರ ಕ್ರಮಕ್ಕೆ ಸದಾನಂದ ಗೌಡ ಕುಟುಂಬ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರೆ ಮತ್ತೊಂದೆಡೆ, ಮಾಜಿ ಸಚಿವ ಸುರೇಶ್ ಕುಮಾರ್, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗುಪ್ತಚರ ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯೇ ಇರುವುದರಿಂದ ಸಿದ್ದರಾಮಯ್ಯ ಗಮನಕ್ಕೆ ಬಾರದೇ ಕೇಂದ್ರ ಸಚಿವರ ದೂರವಾಣಿ ಕದ್ದಾಲಿಕೆ ಮಾಡಲು ಸಾಧ್ಯವಿಲ್ಲ. ದುರುದ್ದೇಶದಿಂದಲೇ ಸದಾನಂದ ಗೌಡರ ದೂರವಾಣಿ ಸಂಭಾಷಣೆಗಳನ್ನು ಕದ್ದಾಲಿಕೆ ಮಾಡಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಅವರೇ ಹೊಣೆ ಎಂದು ಸುರೇಶ್ ಕುಮಾರ್ ಆರೋಪಿಸಿದ್ದಾರೆ.
ಈ ಹಿಂದೆ ರಾಮಕೃಷ್ಣ ಹೆಗ್ಗಡೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ದೂರವಾಣಿ ಕದ್ದಾಲಿಕೆ ಪ್ರಕರಣ ನಡೆದಿತ್ತು. ದೂರವಾಣಿ ಕದ್ದಾಲಿಕೆ ಆರೋಪದ ಹಿನ್ನೆಲೆಯಲ್ಲಿ ರಾಮಕೃಷ್ಣ ಹೆಗ್ಗಡೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಸಿದ್ದರಾಮಯ್ಯ ಅವಧಿಯಲ್ಲೂ ಇಂತಹದ್ದೇ ಘಟನೆ ನಡೆದಿದೆ. ಸಿದ್ದರಾಮಯ್ಯ ಅವರೂ ರಾಜೀನಾಮೆ ನೀಡಬೇಕು ಎಂದು ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.
ಡಿವಿಎಸ್ ಪುತ್ರ ಕಾರ್ತಿಕ್ ಗೌಡ ಮತ್ತು ನಟಿ ಮೈತ್ರಿಯಾ ಗೌಡ ಅವರ ವಿವಾಹ ಪ್ರಕರಣ ಸಂಬಂಧ ಸದಾನಂದಗೌಡ ಅವರ ಕುಟುಂಬದ ಐದು ಮಂದಿಯ ದೂರವಾಣಿ ಸಂಭಾಷಣೆಯನ್ನು ದಾಖಲಿಸಿಕೊಳ್ಳುವಂತೆ ಆರ್ಟಿ ನಗರ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು ಸೂಚಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.