ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ'ಕ್ಕೆ ವಿಶೇಷ ಸ್ಥಾನ ನೀಡುವ ಸಂವಿಧಾನದ 370ನೇ ವಿಧಿ ರಾಷ್ಟ್ರೀಯ ವಿಚಾರವಾಗಿದ್ದು, ಇದನ್ನು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ನ.25ರಿಂದ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ನ.19ರಂದು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಪ್ರಚಾರ ಕೈಗೊಂಡ ರಾಜನಾಥ್ ಸಿಂಗ್, ಸಂವಿಧಾನದ 370ನೇ ವಿಧಿ ಬಗ್ಗೆ ಬಿಜೆಪಿ ಸ್ಪಷ್ಟ ನಿಲುವು ಹೊಂದಿದೆ. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಚುನಾವಣೆ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಓಟ್ ಬ್ಯಾಂಕ್ ರಾಜಕಾರಣ ಮಾಡುವ ದೃಷ್ಠಿಯಿಂದ ಜಮ್ಮು-ಕಾಶ್ಮೀರ ಪಕ್ಷಗಳು ರಾಜ್ಯಕ್ಕೆ ವಿಶೇಷ ಸ್ಥಾನ ನೀಡಿರುವ 370ನೇ ವಿಧಿ ವಿಷಯವನ್ನು ಬಳಸಿಕೊಳ್ಳಬಾರದು ಎಂದು ರಾಜನಾಥ್ ಸಿಂಗ್ ಕರೆ ನೀಡಿದ್ದಾರೆ. ಬಿಜೆಪಿ 370ನೇ ವಿಧಿಯನ್ನು ರದ್ದುಗೊಳಿಸುವ ಬಗ್ಗೆ ಚರ್ಚೆಗೆ ಸಿದ್ಧವಿದೆ. ಆದರೆ ಚುನಾವಣಾ ವಿಷಯ ಅಭಿವೃದ್ಧಿಯಾಗಿರಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ಜಮ್ಮು-ಕಾಶ್ಮೀರದ ಅಭಿವೃದ್ಧಿಯತ್ತ ಗಮನ ಹರಿಸಲಿದೆ ಎಂದು ರಾಜ್ಯದ ಜನಗೆತೆ ಭರವಸೆ ನೀಡಿದ್ದಾರೆ.