ನವದೆಹಲಿ : 'ಪಾಕಿಸ್ತಾನ'ದಲ್ಲಿ ವಿದ್ಯಾರ್ಥಿಗಳ ಹತ್ಯೆ ಮಾಡಿರುವ ತಾಲೀಬಾನ್ ಉಗ್ರರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದು ಮಾತಿನಲ್ಲಿ ವರ್ಣಿಸಲಾಗದ ಕ್ರೂರತೆ ಎಂದಿದ್ದಾರೆ.
ಪಾಕ್ ನ ಸೈನಿಕ ಶಾಲೆಯ ಮೇಲೆ ಉಗ್ರರ ದಾಳಿ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಮೋದಿ, ವಿದ್ಯಾರ್ಥಿಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಶಾಲೆ ಮೇಲೆ ನಡೆದಿರುವ ದಾಳಿಯನ್ನು ಹೇಡಿಗಳ ಭಯೋತ್ಪಾದಕ ದಾಳಿ ಎಂದು ಖಂಡಿಸಿದ್ದಾರೆ. ಶಾಲೆಯಲ್ಲಿ ಹತ್ಯೆಗೀಡಾದ ಕುಟುಂಬದ ದುಃಖದಲ್ಲಿ ಭಾಗಿಯಾಗಿರುವುದಾಗಿ ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಡಿ.16ರಂದು ಮಧ್ಯಾಹ್ನ ಪಾಕಿಸ್ತಾನದ ಪೇಷಾವರ್ ನಲ್ಲಿರುವ ಶಾಲೆಯ ಮೇಲೆ ಆತ್ಮಾಹುತಿ ಬಾಂಬರ್ ಗಳು ದಾಳಿ ನಡೆಸಿದ್ದರ ಪರಿಣಾಮ ಈವರೆಗೂ 126 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. 80ಕ್ಕೂ ಅಧಿಕ ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಉಗ್ರರ ದಾಳಿಗೆ ಪಾಕ್ ಸೇನೆ ಪ್ರತಿ ದಾಳಿ ನಡೆಸಿದ್ದು ಮೂವರು ಭಯೋತ್ಪಾದಕರನ್ನು ಸೇನೆ ಹೊಡೆದುರುಳಿಸಿದೆ. ಭಯೋತ್ಪಾದಕರ ಕೃತ್ಯಕ್ಕೆ ಪಾಕಿಸ್ತಾನದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ತಾಲೀಬಾನ್ ಉಗ್ರ ಸಂಘಟನೆಗೆ ಪೋಷಕರು ಹಿಡಿ ಶಾಪ ಹಾಕುತ್ತಿದ್ದಾರೆ.