ಜೈಪುರ : 'ರಾಜಸ್ತಾನ'ದ 16 ಸಚಿವರಿಗೆ ಇಂಡಿಯನ್ ಮುಜಾಹಿದ್ದೀನ್ ಉಗ್ರರು ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ. 2015 ಜನವರಿ 26, ಗಣರಾಜ್ಯೋತ್ಸವ ದಿನದಂದು ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲಾಗುವುದು ಎಂದು ಬೆದರಿಕೆ ಹಾಕಲಾಗಿದೆ.
ಬೆದರಿಕೆ ಸಂದೇಶದಿಂದಾಗಿ ರಾಜಸ್ಥಾನದಲ್ಲಿ ಆತಂಕ ಸೃಷ್ಟಿಯಾಗಿದ್ದು, ಸಚಿವರಿಗೆ ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಲಿಯೋನಾಜಾರ್ದ ಎಂಬ ಇಮೇಲ್ ಐಡಿಯಿಂದ ಈ ಬೆದರಿಕೆ ಸಂದೇಶ ಬಂದಿದ್ದು "ನಾವು ಜನವರಿ 26ರಂದು ರಾಜಸ್ತಾನದಲ್ಲಿ ಹಲವಾರು ಸ್ಫೋಟಗಳನ್ನು ಮಾಡಲು ಯೋಜನೆ ರೂಪಿಸಿದ್ದೇವೆ" ಎಂದು ಹೇಳಿದ್ದಾರೆ.
10 ಕ್ಯಾಬಿನೆಟ್ ಸಚಿವರು ಮತ್ತು 6 ಸಚಿವರ ಇಮೇಲ್ ಐಡಿಗಳಿಗೆ ಈ ಬೆದರಿಕೆ ಸಂದೇಶ ಬಂದಿದೆ. ಬೆದರಿಕೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಭದ್ರತೆ ಕಲ್ಪಿಸಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು ರಾಜಸ್ತಾನದ ಗೃಹ ಸಚಿವ ಗುಲಾಬ್ ಚಂದ್ ಕತಾರಿಯಾ ಹೇಳಿದ್ದಾರೆ.