ಮುಂಬೈ : ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಭಾರತ ತಂಡದ ನಾಯಕ ಎಂ.ಎಸ್ ಧೋನಿ ವಿದಾಯ ಘೋಷಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಸೋಲುಂಟಾಗಿರುವ ಹಿನ್ನೆಲೆಯಲ್ಲಿ ಧೋನಿ ವಿದಾಯ ಘೋಷಿಸಿದ್ದಾರೆ. ಮುಂದಿನ ಪಂದ್ಯಕ್ಕೆ ವಿರಾಟ್ ಕೋಹ್ಲಿ ನಾಯಕತ್ವ ವಹಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಟೆಸ್ಟ್ ಕ್ರಿಕೆಟ್ ಯಿಂದ ನಿವೃತ್ತಿ ಪಡೆದಿರುವ ಧೋನಿ, ಏಕದಿನ ಕ್ರಿಕೆಟ್ ನಲ್ಲಿ ಮುಂದುವರೆಯಲಿದ್ದಾರೆ. 2005ರಲ್ಲಿ ಚೆನ್ನೈ ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಧೋನಿ ಈವರೆಗೂ 90ಟೆಸ್ಟ್ ಪಂದ್ಯಗಳನ್ನಾಡಿದ್ದು 60 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ 27 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ 15ಟೆಸ್ಟ್ ಪಂದ್ಯಗಳು ಡ್ರಾ, 18 ಟೆಸ್ಟ್ ಪಂದ್ಯಗಳಲ್ಲಿ ಸೋತಿದೆ.
ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ನಲ್ಲಿ ಒಟ್ಟು 4876 ರನ್ ಗಳನ್ನು ಗಳಿಸಿದ್ದಾರೆ. 224 ಧೋನಿ ಗಳಿಸಿರುವ ಗರಿಷ್ಠ ರನ್ ಆಗಿದೆ. 2013ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ವೈಟ್ ವಾಶ್ ಮಾಡಿದ್ದ ಕೀರ್ತಿಯೂ ಧೋನಿಗೆ ಸಲ್ಲುತ್ತದೆ. ಟೆಸ್ಟ್ ಕ್ರಿಕೆಟ್ ಗೆ ಮಹೇಂದ್ರ ಸಿಂಗ್ ಧೋನಿ ಏಕಾಏಕಿ ವಿದಾಯ ಘೋಷಿಸಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.