ನವದೆಹಲಿ : ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಸುಮಾರು 2 ತಾಸಿಗೂ ಹೆಚ್ಚು ಕಾಲ ರಾಜಪಥದ ತೆರೆದ ಅಂಗಳದಲ್ಲಿ ಆಸೀನರಾಗಲಿದ್ದಾರೆ. ಈ ಮೂಲಕ ತೆರೆದ ಅಂಗಳದಲ್ಲಿ ಇಷ್ಟೊಂದು ಹೆಚ್ಚು ಸಮಯ ಕುಳಿತುಕೊಳ್ಳುತ್ತಿರುವ ಮೊದಲ ಅಮೆರಿಕ ಅಧ್ಯಕ್ಷ ಎನ್ನಿಸಿಕೊಳ್ಳಲಿದ್ದಾರೆ.
ಉಗ್ರರ ದಾಳಿಯ ಬೆದರಿಕೆಯ ಹೊರತಾಗಿಯೂ ಅಮೆರಿಕ ಅಧ್ಯಕ್ಷರ ಈ ನಿರ್ಧಾರ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಜ. 26ರ ಸಮಾರಂಭಕ್ಕೆ ಬರಲು ಒಬಾಮಾ ಒಪ್ಪಿರುವುದು ಮತ್ತು ಇಷ್ಟೊಂದು ಸುದೀರ್ಘ ಅವಧಿಯ ಕಾಲ ತೆರೆದ ಅಂಗಳದಲ್ಲಿ ಕುಳಿತುಕೊಳ್ಳಲು ಅವರು ನಿರ್ಧರಿಸಿರುವುದು ಭಾರತ- ಅಮೆರಿಕ ಸಂಬಂಧದ ಗಟ್ಟಿತನ ಮತ್ತು ಮಹತ್ವ ತೋರಿಸುತ್ತದೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಒಬಾಮಾ ಜತೆ 450 ಅಮೆರಿಕದ ರಹಸ್ಯ ಭದ್ರತಾ ಸಿಬ್ಬಂದಿ 4 ವಿಮಾನಗಳಲ್ಲಿ ಭಾರತಕ್ಕೆ ಆಗಮಿಸುತ್ತಾರೆ. ಇವರ ಜತೆಗೆ 12 ಸರಕು ವಿಮಾನಗಳಲ್ಲಿ ಅಮೆರಿಕ ಅಧ್ಯಕ್ಷರ ವಾಹನ, ಹೆಲಿಕಾಪ್ಟರ್‌ಗಳು, ಸಂವಹನ ಟ್ರಕ್‌ಗಳು, ಭದ್ರತಾ ಟೆಂಟ್‌ಗಳು, ಅತ್ಯಾಧುನಿಕ ಸಂವಹನ ಸಾಧನಗಳು ಭಾರತಕ್ಕೆ ಬರಲಿವೆ. ಈ ಭದ್ರತಾ ಸಿಬ್ಬಂದಿ ಬಯಲು ಪ್ರದೇಶದಲ್ಲಿ ಅಮೆರಿಕ ಅಧ್ಯಕ್ಷರನ್ನು ಇಷ್ಟೊಂದು ಹೊತ್ತು ಇರಲು ಬಿಡುವುದಿಲ್ಲ. 2009 ಮತ್ತು 2013ರಲ್ಲಿ ಒಬಾಮಾ ಪ್ರಮಾಣವಚನ ಸ್ವೀಕರಿಸುವಾಗ ಸುಮಾರು 40 ನಿಮಿಷ ಹೊರಾಂಗಣದಲ್ಲಿದ್ದುದೇ ಈವರೆಗಿನ ಅತಿ ಸುದೀರ್ಘದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಬಾಮಾ ಭಾರತ ಭೇಟಿ ವೇಳೆ ದೆಹಲಿಯ ಮೇಲೆ ವಿಮಾನ ಸಂಚಾರ ಸಂಪೂರ್ಣ ರದ್ದಾಗುವುದಿಲ್ಲ. ಕೆಲ ಪರ್ಯಾಯ ಮಾರ್ಗಗಳನ್ನು ಅವಲೋಕಿಸಲಾಗುತ್ತಿದೆ. ಉಳಿದಂತೆ ವಾಣಿಜ್ಯಿಕ ಹಾರಾಟ ಮಾರ್ಗಗಳು ಮತ್ತು ಇತರೆಡೆ ವಿಮಾನ ಹಾರಾಟ ನಿಷೇಧ ಮಾಡಲಾಗಿದೆ.
ಒಬಾಮಾ ಭೇಟಿ ಹಿನ್ನೆಲೆಯಲ್ಲಿ ರಾಜಪಥ ಜ.23ರಿಂದಲೇ ಸಾರ್ವಜನಿಕ ಸಂಚಾರಕ್ಕೆ ಬಂದ್ ಆಗಲಿದೆ. ಜ.23ರಿಂದ ರೈಸೀನಾ ಹಿಲ್‌ನ ಸರ್ಕಾರಿ ಕಚೇರಿಗಳಿಗೆ ರಜೆ ಸಾರಲಾಗುತ್ತದೆ. ಅಲ್ಲದೆ, ರಾಜಪಥ ಮತ್ತು ರೈಸೀನಾ ಹಿಲ್‌ಗೆ ಹೋಗುವ ಮಾರ್ಗಗಳಲ್ಲಿನ ರಸ್ತೆ ಬದಿ ಹೋಟೆಲ್‌ಗಳಲ್ಲಿ ಅಡುಗೆ ಅನಿಲ ಬಳಕೆ ನಿಷೇಧಿಸಲಾಗುತ್ತದೆ. ಅಮೆರಿಕದ ಮತ್ತು ಭಾರತದ ಉಪಗ್ರಹಗಳು ಭೇಟಿ ವೇಳೆ ಕಣ್ಗಾವಲಿಡಲಿವೆ. ಒಬಾಮಾ ಜ.25ರಂದು ದೆಹಲಿಗೆ ಬಂದಿಳಿಯುವ ಸಾಧ್ಯತೆ ಇದೆ.