ನವದೆಹಲಿ : ವಿದೇಶಿ 'ಇ-ಕಾಮರ್ಸ್' ಸಂಸ್ಥೆಗಳಾದ ಇಬೇ, ಅಮೇಜಾನ್ ಕಂಪನಿಗಳನ್ನು ನಿಷೇಧಿಸಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆರ್ಥಿಕ ವಿಭಾಗದ ಸ್ವದೇಶಿ ಜಾಗರಣ ಮಂಚ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಅಮೇಜಾನ್ ಹಾಗೂ ಇಬೇ ಕಂಪನಿಗಳು ದೇಶೀಯ ಕಂಪನಿಗಳನ್ನು ನಾಮಾವಶೇಷ ಮಾಡುತ್ತಿದ್ದು ಇದನ್ನು ತಡೆಗಟ್ಟಲು ವಿದೇಶಿ ಕಂಪನಿಗಳನ್ನು ನಿಷೇಧಿಸಬೇಕೆಂದು ಸ್ವದೇಶಿ ಜಾಗರಣಾ ಮಂಚ್ ಅಭಿಪ್ರಾಯಪಟ್ಟಿದೆ.
ಕೇವಲ ವಿದೇಶಿ ಮೂಲದ ಕಂಪನಿಗಳನ್ನಷ್ಟೇ ಅಲ್ಲದೇ ವಿದೇಶದಿಂದ ಹಣ ಪಡೆಯುತ್ತಿರುವ ಫ್ಲಿಪ್ ಕಾರ್ಟ್ ಕಂಪನಿಗಳಿಗೂ ನಿಷೇಧ ಹೇರಬೇಕೆಂದು ಆರ್.ಎಸ್.ಎಸ್ ಒತ್ತಾಯಿಸಿದೆ. ಇತ್ತೀಚೆಗಷ್ಟೇ ಅಧಿಕಾರಕ್ಕೆ ಬಂದ ಎನ್.ಡಿ.ಎ ಸರ್ಕಾರ ಜಾರಿಗೆ ತಂದಿದ್ದ ಎಫ್.ಡಿ.ಐ ನೀತಿಗಳಿಗೆ ಆರ್.ಎಸ್.ಎಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಇ-ಕಾಮರ್ಸ್ ನಲ್ಲಿ ಎಫ್.ಡಿ.ಐ ಗೆ ಅನುಮತಿ ನಿರಾಕರಿಸಬೇಕೆಂದು ಒತ್ತಾಯಿಸುತ್ತಿದೆ.
ವಿದೇಶಗಳಿಂದ ಹಣ ಪಡೆಯುತ್ತಿರುವುದರಿಂದ ಭಾರತದ ಇ-ಕಾಮರ್ಸ್ ಸಂಸ್ಥೆಗಳಾದ ಫ್ಲಿಪ್ ಕಾರ್ಟ್ ಕೂಡ ವಿದೇಶಿ ಸಂಸ್ಥೆಗಳಂತಾಗಿವೆ, ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಹಣಕಾಸು ಸಚಿವರಿಗೆ ಮನವಿ ಮಾಡಿರುವುದಾಗಿ ಸ್ವದೇಶಿ ಜಾಗರಣ ಮಂಚ್ ನ ಅಶ್ವನಿ ಮಹಾಜನ್ ಹೇಳಿದ್ದಾರೆ.