ನವದೆಹಲಿ : ಫೆ.7ರಂದು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯನ್ನು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಲು ಪೊಲೀಸರು ಹಾಗೂ ಅರೆ ಸೇನಾಪಡೆ ಸೇರಿದಂತೆ 60 ಸಾವಿರ ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸಲಿದೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಗಡಿ ಭದ್ರತಾ ಪಡೆ ಸೇರಿದಂತೆ ಅರೆ ಸೇನಾ ಪಡೆಗಳು 70 ವಿಧಾನಸಭೆ ಕ್ಷೇತ್ರಗಳ 11,763 ಮತಗಟ್ಟೆಗಳಲ್ಲಿ ಭದ್ರತೆ ಒದಗಿಸಲಿದ್ದಾರೆ. ಗೃಹರಕ್ಷಕ ಪಡೆ ಸಿಬ್ಬಂದಿಯೂ ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
2013ರಲ್ಲಿ 677 ಇದ್ದ ಸೂಕ್ಷ್ಮ ಮತಗಟ್ಟೆಗಳ ಸಂಖ್ಯೆ ಈ ವರ್ಷ 695ಕ್ಕೆ ಏರಿಕೆಯಾಗಿದ್ದು, ಅದರಲ್ಲಿ 173 ಅತಿ ಸೂಕ್ಷ್ಮ ಮತಗಟ್ಟೆಗಳಾಗಿವೆ.
ತಮ್ಮ ವ್ಯಾಪ್ತಿಯಲ್ಲಿ ನಿಗಾ ತೀವ್ರಗೊಳಿಸುವಂತೆ ಭದ್ರತಾ ಪಡೆಗಳಿಗೆ ಈಗಾಗಲೇ ಸೂಚಿಸಲಾಗಿದೆ. ದೆಹಲಿ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣೆಯ ದಿನ ಮತಗಟ್ಟೆ ಹಾಗೂ ರಸ್ತೆಗಳ ಮೇಲೆ 60 ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಪೊಲೀಸರನ್ನು ಚುನಾವಣೆಯ ದಿನ ನಸುಕಿನಲ್ಲೇ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.