ನವದೆಹಲಿ : ಭಾರತದಲ್ಲಿ ಪ್ರಸ್ತುತ ಇರುವ ಧಾರ್ಮಿಕ ಅಸಹಿಷ್ಣುತೆಯನ್ನು ಮಹಾತ್ಮಾ ಗಾಂಧಿ ನೋಡಿದ್ದರೆ ಅಘಾತಕ್ಕೊಳಗಾಗುತ್ತಿದ್ದರು ಎಂಬ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಹೇಳಿಕೆಗೆ ವಿಶ್ವಹಿಂದೂ ಪರಿಷತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬರಾಕ್ ಒಬಾಮ ಭಾರತದ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಮಾತನಾಡುವ ಮೊದಲು ಅಮೆರಿಕಾದಲ್ಲಿರುವ ಕಪ್ಪು ವರ್ಣೀಯರ ಮೇಲೆ ದಾಳಿ ನಡೆಯುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ವಿಶ್ವಹಿಂದೂ ಪರಿಷತ್ ನ ಸುರೇಂದ್ರ ಜೈನ್ ಹೇಳಿದ್ದಾರೆ.
ಅಮೆರಿಕಾದಲ್ಲಿ ಇಂದಿಗೂ ಕಪ್ಪು ವರ್ಣೀಯ ಜನರ ಮೇಲೆ ದಾಳಿ ನಡೆಸಲಾಗುತ್ತಿದೆ. ಸ್ವತಃ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಅವರು ದಾಳಿಗೊಳಗಾಗಿರುವ ಜನಾಂಗಕ್ಕೆ ಸೇರಿದವರಾಗಿದ್ದರೂ ಈ ವರೆಗೂ ದಾಳಿಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಅಮೆರಿಕಾ ಅಧ್ಯಕ್ಷರು ಭಾರತದ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ವಿಶ್ವಹಿಂದೂ ಪರಿಷತ್ ಹೇಳಿದೆ.
ಬರಾಕ್ ಒಬಾಮ ಹೇಳಿಕೆ ಹಿಂದೆ ಕ್ರಿಶ್ಚಿಯನ್ ಮಿಷನರಿಗಳ ಪ್ರಭಾವವಿದೆ. ಕ್ರಿಶ್ಚಿಯನ್ ಮಿಷನರಿಗಳು ಒಬಾಮ ಅವರ ಮೂಲಕ ಭಾರತದ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿ.ಹೆಚ್.ಪಿ ಆರೋಪಿಸಿದೆ.