ಪಣಜಿ : ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರೀಕ್ಕರ್ ರಾಜೀನಾಮೆಯಿಂದ ತೆರವುಗೊಂಡಿದ್ದ ಪಣಜಿ ಶಾಸಕ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಕಳೆದ ಫೆಬ್ರವರಿಯ 13ರಂದು ನಡೆದಿದ್ದ ಪಣಜಿ ವಿಧಾನಸಭಾ ಕ್ಷೇತದ ಉಪಚುನಾವಣೆಯ ಫಲಿತಾಂಶ ಸೋಮವಾರ ಹೊರಬಿದ್ದಿದ್ದು ಆಡಳಿತರೂಢ ಬಿಜೆಪಿ ಭರ್ಜರಿ ಜಯ ಗಳಿಸಿದೆ. ಈ ಮೂಲಕ, ಪಣಜಿ ಕ್ಷೇತ್ರವನ್ನು ಸತತ 6ನೇ ಬಾರಿ ತನ್ನದಾಗಿಸಿಕೊಂಡಿದೆ. 1994ರಿಂದ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಈ ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸಿದ್ದರು.
ಮನೋಹರ್ ಪರೀಕ್ಕರ್ ಕೇಂದ್ರ ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತೆರವುಗೊಂಡಿದ್ದ ಪಣಜಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಕುಂಕೊಲಿಂಕರ್ ಸ್ಪರ್ಧಿಸಿದ್ದರು. ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಸುರೇಂದ್ರ ಫರ್ತಡೊ ಅವರ ವಿರುದ್ಧ ಸಿದ್ಧಾರ್ಥ ಕುಂಕೊಲಿಂಕರ್ 5,368 ಮಂತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ಧಾರ್ಥ ಕ್ಷೇತ್ರದ ಜನತೆಯ ಆಕಾಂಕ್ಷೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದಾರೆ.