ನವದೆಹಲಿ : 2012ರಿಂದಲೂ ಸಂಸತ್ತಿನ ಒಪ್ಪಿಗೆಗಾಗಿ ಕಾದಿದ್ದ `ಪ್ರಾಜೆಕ್ಟ್ 17ಎ'ಗೆ ನರೇಂದ್ರ ಮೋದಿ ಸರ್ಕಾರ ಸಮ್ಮತಿ ಸೂಚಿಸಿದೆ. ಈ ಮೂಲಕ ಅತ್ಯಾಧುನಿಕ 7 ಸಮರ ನೌಕೆ ನಿರ್ಮಾಣಕ್ಕೆ ರಹದಾರಿ ದೊರೆತಂತಾಗಿದೆ.
ಯೋಜನೆಯಂತೆ ರೂ.50 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೌಕೆಗಳು ದೇಶದ ನೌಕಾಪಡೆಯನ್ನು ಚೀನಾಗಿಂತಲೂ ಬಲಿಷ್ಠಗೊಳಿಸಲಿವೆ ಎಂದು ಮೂಲಗಳು ತಿಳಿಸಿವೆ.
ಹೊಸ ನೌಕೆಗಳು ಮುಂಬೈ ಮತ್ತು ಕೊಲ್ಕತ್ತಾದಲ್ಲಿ ನಿರ್ಮಾಣಗೊಳ್ಳಲಿವೆ. ಇದರಿಂದ ರಕ್ಷಣಾ ಸಾಮಗ್ರಿಗಳ ಆಮದಿಗಾಗಿ, ವಿಶೇಷವಾಗಿ ಯುದ್ಧನೌಕೆಗಳಿಗಾಗಿ ವಿದೇಶದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಪರಿಣಾಮ, ಭಾರತ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಮಾರುಕಟ್ಟೆಯಾಗಿ ರೂಪುಗೊಳ್ಳಲಿದೆ.
ಅರಬ್ಬೀ ಸಮುದ್ರದಲ್ಲಿ ಹೆಚ್ಚುತ್ತಿರುವ ಚೀನಾ ಸಬ್ ಮೆರಿನ್ ಗಳ ಉಪಸ್ಥಿತಿ ಭಾರತಕ್ಕೆ ಕಳವಳ ಮೂಡಿಸಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಸಮಿತಿ ಸಭೆ ಕರೆದಿದ್ದರು. ಏಳು ಅತ್ಯಾಧುನಿಕ ಯುದ್ಧ ನೌಕೆಗಳ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದರು.