ಸೂರತ್ : ಒಂದು ಸೂಟ್ ಗೆ ನಾಲ್ಕು ಕೋಟಿ ರೂಪಾಯಿ ? ಹೌದು! ಪ್ರಧಾನಿ ನರೇಂದ್ರ ಮೋದಿ ಗಣರಾಜ್ಯೋತ್ಸವದಂದು ತೊಟ್ಟಿದ್ದ ಸೂಟ್ ದಾಖಲೆ ಬೆಲೆಗೆ ಹರಾಜಾಗಿದೆ. ಗುಜರಾತ್ ನ ವಜ್ರ ವ್ಯಾಪಾರಿ ಲಾಲ್ ಜಿ ಎಂಬುವವರು 4.31ಕೋಟಿ ರೂಪಾಯಿ ಬೆಲೆಗೆ ಸೂಟನ್ನು ಖರೀದಿಸಿದ್ದಾರೆ.
11 ಲಕ್ಷ ರೂಪಾಯಿಗೆ ಕೇಂದ್ರ ಸರ್ಕಾರ ಪ್ರಧಾನಿ ಮೋದಿ ಅವರ ಸೂಟ್ ನ್ನು ಬಿಡ್ ಮಾಡಿತ್ತು. ಕಳೆದ 2 ದಿನಗಳಿಂದ ಚುರುಕಿನಿಂದ ನಡೆದಿದ್ದ ಹರಾಜು ಪ್ರಕ್ರಿಯೆಯಲ್ಲಿ ಫೆ.20ರಂದು ಮೋದಿ ಸೂಟ್ ಗೆ ಭಾರಿ ಬೇಡಿಕೆ ವ್ಯಕ್ತವಾಗಿತ್ತು. 1.20 ಕೋಟಿ ಬೆಲೆಯಿಂದ ಪ್ರಾರಂಭವಾದ ಅಂತಿಮ ದಿನದ ಬಿಡ್ ದಾಖಲೆಯ 4.31ಕೋಟಿ ರೂ. ಮೊತ್ತಕ್ಕೆ ಅಂತ್ಯಗೊಂಡಿದೆ.
ಮಧ್ಯಾಹ್ನದ ನಂತರ ಮೋದಿ ಸೂಟ್ ಗೆ 2.83ಕೋಟಿ ರೂಪಾಯಿ ಬಿಡ್ ಮಾಡಲಾಗಿತ್ತು. ಆದರೆ ಸಂಜೆ 5ಗಂಟೆಗೆ ಹರಾಜು ಪ್ರಕ್ರಿಯೆ ಕೊನೆಗೊಳ್ಳಲಿದ್ದ ಹಿನ್ನೆಲೆಯಲ್ಲಿ ಸೂತ್ ಗಾಗಿ ಭಾರಿ ಪೈಪೋಟಿ ನಡೆದಿದ್ದು ಅಂತಿಮವಾಗಿ ದಾಖಲೆಯ ಮೊತ್ತಕ್ಕೆ ಹರಾಜಾಗಿದೆ.
'ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಅವರು ಈ ರೀತಿ ಹರಾಜು ಏರ್ಪಡಿಸಿದ್ದರು. ಪ್ರಧಾನಿಯಾಗಿ ಈಗ ಅವರು ಗಂಗಾ ನದಿ ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಹರಾಜಿನಲ್ಲಿ ಭಾಗವಹಿಸಿದ್ದೇನೆ' ಎಂದು ಸೂಟ್ ಖರೀದಿಸಿರುವ ಲಾಲ್ ಜಿ ಹೇಳಿದ್ದಾರೆ.
ಈ ಹರಾಜು ಪ್ರಕ್ರಿಯೆಯಿಂದ ಬಂದ ಹಣವನ್ನು ಗಂಗಾ ನದಿ ಸ್ವಚ್ಚತೆಗೆ ಬಳಸಲಾಗುತ್ತದೆ.