ನವದೆಹಲಿ : 'ಎಐಸಿಸಿ'ಯಿಂದ ರಜೆ ಪಡೆದಿದ್ದ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿಲ್ಲ, ಭಾರತದಲ್ಲೇ ಇದ್ದಾರೆ ಎಂದು ಹೇಳಿದ್ದ ಕಾಂಗ್ರೆಸ್ ಮುಖಂಡ ಜಗದೀಶ್ ಶರ್ಮಾ ಅವರ ಮಾಹಿತಿಯನ್ನು ರಾಹುಲ್ ಗಾಂಧಿ ಕಚೇರಿ ಸಿಬ್ಬಂದಿಗಳು ಅಲ್ಲಗಳೆದಿದ್ದಾರೆ.
ಸಂಸತ್ ಅಧಿವೇಶನ, ಪಕ್ಷದ ಕೆಲಸಗಳಿಂದ ರಾಹುಲ್ ಗಾಂಧಿ ರಜೆ ಪಡೆದಿರುವ ಬಗ್ಗೆ ಮಾಹಿತಿ ನೀಡಿದ್ದ ಜಗದೀಶ್ ಶರ್ಮಾ, ರಾಹುಲ್ ಗಾಂಧಿ ರಜೆ ಪಡೆದು ವಿದೇಶಕ್ಕೆ ಹೋಗಿಲ್ಲ. ಉತ್ತರಾಖಂಡ್ ನಲ್ಲೇ ಇದ್ದಾರೆ ಎಂದು ಹೇಳಿದ್ದರು. ಅಲ್ಲದೇ ಟ್ವಿಟರ್ ನಲ್ಲಿ ರಾಹುಲ್ ಗಾಂಧಿ ಟೆಂಟ್ ಒಂದರಲ್ಲಿರುವ ಫೊಟೊ ಅಪ್ ಲೋಡ್ ಮಾಡಿದ್ದರು.
ಆದರೆ ಜಗದೀಶ್ ಶರ್ಮಾ ನೀಡಿರುವ ಮಾಹಿತಿಯನ್ನು ಅಲ್ಲಗಳೆದಿರುವ ರಾಹುಲ್ ಗಾಂಧಿ ಕಚೇರಿ ಸಿಬ್ಬಂದಿಗಳು, ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದ್ದಾರೆ. ಕೆಲದಿನಗಳ ಬಳಿಕ ಭಾರತಕ್ಕೆ ವಾಪಸ್ಸಾಗಲಿದ್ದಾರೆ. ರಾಹುಲ್ ಗಾಂಧಿ 2008ರಲ್ಲಿ ಉತ್ತರಾಖಂಡ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತೆಗೆದಿರುವ ಫೊಟೋವನ್ನು ಜಗದೀಶ್ ಶರ್ಮಾ ಬಿಡುಗಡೆ ಮಾಡಿದ್ದಾರೆ. ಜಗದೀಶ್ ಶರ್ಮಾ ನೀಡಿರುವ ಮಾಹಿತಿ ಸುಳ್ಳು ಎಂದು ಹೇಳಿದ್ದಾರೆ.
ಪಕ್ಷದ ಸರಣಿ ಸೋಲಿನಿಂದ ಕಂಗೆಟ್ಟಿರುವ ರಾಹುಲ್ ಗಾಂಧಿ ಸಂಸತ್ ಅಧಿವೇಶನಕ್ಕೂ ಹಾಜರಾಗದೇ ದೀರ್ಘಾವಧಿ ರಜೆ ಪಡೆದಿದ್ದಾರೆ.