ಬೆಂಗಳೂರು : ಈ ಬಾರಿಯ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಅನುಸರಿಸುವ ಅವಶ್ಯಕತೆ ಬರುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆಯಲ್ಲಿ 300 ರಿಂದ 500 ಮೆಗಾವ್ಯಾಟ್ ವಿದ್ಯುತ್ ಕೊರತೆಯಾಗುವ ಅಂದಾಜಿದ್ದು, ಈ ಬೇಡಿಕೆ ಪೂರೈಸಲು ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು. 8,900 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, 195.7 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆ ಮಾಡಲಾಗಿದೆ ಎಂದು ತಿಳಿಸಿದರು.
500 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದೆ. ದಕ್ಷಿಣ ಭಾರತದ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಖರೀದಿಸಲಾಗುತ್ತಿದ್ದು, ಇದರೊಂದಿಗೆ ದಕ್ಷಿಣ ಭಾರತದ ವಿದ್ಯುತ್ ಸ್ಥಾವರದಿಂದ ಒಂದು ಸಾವಿರ ಮೆಘಾವ್ಯಾಟ್ ವಿದ್ಯುತ್ ಖರೀದಿಸಲಾಗುವುದು. ಮಾರ್ಚ್ನಿಂದ ವಿದ್ಯುತ್ ಖರೀದಿ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯುತ್ ಕೊರತೆಯುಂಟಾಗದು, ಅದೇ ರೀತಿ ನೀರು ಪೂರೈಕೆಗೆ ವಿದ್ಯುತ್ ಗೂ ಅಡಚಣೆ ಉಂಟಾಗುವುದಿಲ್ಲ ಎಂದು ಹೇಳಿದರು.
ಉತ್ತರ ಭಾರತದ ಹೈಟೆನ್ಷನ್ ಮಾರ್ಗದಿಂದ 700 ಮೆಗಾವ್ಯಾಟ್ ವಿದ್ಯುತ್ ಪಡೆಯಲಿದ್ದೇವೆ. ಹಾಗಾಗಿ ಈ ಬಾರಿಯ ಬೇಸಿಗೆಯಲ್ಲಿ ವಿದ್ಯುತ್ ತೊಂದರೆ ಎದುರಾಗದು. ಲೋಡ್ ಶೆಡ್ಡಿಂಗ್ ಮಾಡಬೇಕಾದ ಸಮಸ್ಯೆ ಬರುವುದಿಲ್ಲ ಎಂದು ತಿಳಿಸಿದರು.