ನವದೆಹಲಿ : ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾದ ಸಂಸತ್ ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ ಎಂದು ವಿದೇಶಾಂಗ ಇಲಾಖೆ ಕಚೇರಿ ಮೂಲಗಳು ಮಾಹಿತಿ ನೀಡಿದೆ.
ಮಾ.12ರಿಂದ 15ರ ಒಳಗಿನ ಅವಧಿಯಲ್ಲಿ ಪ್ರಧಾನಿ ಮೋದಿ ಭಾಷಣ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾಗಲಿದೆ. ಶ್ರೀಲಂಕಾದ ಪ್ರಮುಖ ನಗರಗಳಾದ ಅನುರಾಧಪುರ, ಕ್ಯಾಂಡೀಸ್, ಜಾಫ್ನಾ, ಟ್ರಿಂಕಾಮಲೈಗಳಿಗೆ ಪ್ರಧಾನಿ ಮೋದಿ ಭೇಟಿ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಈಗಾಗಲೇ ಆಸ್ಟ್ರೇಲಿಯಾ, ಅಮೆರಿಕ, ಜಪಾನ್, ನೇಪಾಳಗಳಂಥ ರಾಷ್ಟ್ರಗಳಲ್ಲಿ ಯಶಸ್ವಿ ಪ್ರವಾಸ ಮಾಡಿ ಬಂದಿರುವ ಮೋದಿ ಇದೀಗ ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ. ಇದರ ಜೊತೆಗೆ ಮೋದಿ ಸೀಶೆಲ್ಲೆಸ್ ಹಾಗೂ ಮಾರಿಷಸ್ ಗೂ ಭೇಟಿ ನೀಡಲಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ನಂತರ ಹಲವು ದಶಕಗಳ ಬಳಿಕ ಭಾರತ ಪ್ರಧಾನಿಯೊಬ್ಬರು ಶ್ರೀಲಂಕಾಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಮೊದಲು ಪ್ರಧಾನಿಯಾಗಿದ್ದಾಗ ರಾಜೀವ್ ಗಾಂಧಿ 1987 ರಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಿದ್ದರು.