ಶ್ರೀನಗರ : ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆಯಾಗಲೀ ಹಿಂಸೆಯಾಗಲೀ ಇಲ್ಲವೇ ಇಲ್ಲ; ಇರುವುದಾದರೆ ಅದು ಸರ್ಕಾರ ಪ್ರವರ್ತಿತ ಭಯೋತ್ಪಾದನೆ ಮಾತ್ರ ಎಂದು ಪ್ರತ್ಯೇಕತಾವಾದಿ ಹುರಿಯತ್ ನಾಯಕ ಸೈಯದ್ ಅಲಿ ಶಾ ಗೀಲಾನಿ ಹೇಳಿದ್ದಾರೆ.
ಪಾಕಿಸ್ಥಾನದ ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ ಪ್ರಧಾನಿ ನವಾಜ್ ಶರೀಫ್ ಅವರಿಗೆ ಪತ್ರ ಬರೆದು ಭಯೋತ್ಪಾದನೆ ಮತ್ತು ಹಿಂಸಾಮುಕ್ತ ವಾತಾವರಣ ಏರ್ಪಟ್ಟರೆ ಮಾತ್ರವೇ ಭಾರತ-ಪಾಕ್ ದ್ವಿಪಕ್ಷೀಯ ಬಾಂಧವ್ಯ ಮತ್ತು ಶಾಂತಿ ಮಾತುಕತೆಗಳು ನಡೆಯಲು ಸಾಧ್ಯ ಎಂದು ಹೇಳಿದ್ದರು.
ಮೋದಿ ಮಾತಿಗೆ ತದ್ವಿರುದ್ಧವಾಗಿ ಗೀಲಾನಿ, ಕಾಶ್ಮೀರದಲ್ಲಿ ಭಯೋತ್ಪಾದನೆಯೇ ಇಲ್ಲವೆಂದು ಹೇಳಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗಳು ನಡೆದಿವೆಯಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಗೀಲಾನಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.