ನವದೆಹಲಿ : 'ಕಾಂಗ್ರೆಸ್' ಉಪಾಧ್ಯಕ್ಷ ರಾಹುಲ್ ಗಾಂಧಿ ರಜೆ ತೆಗೆದುಕೊಂಡು ಒಂದು ತಿಂಗಳಾದ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ಅಮೇಥಿ ಲೋಕಸಭಾ ಕ್ಷೇತ್ರದ ಜನತೆ, ತಮ್ಮನ್ನು ಪ್ರತಿನಿಧಿಸುವ ಸಂಸದ ಕಾಣೆಯಾಗಿದ್ದಾರೆ ಎಂದು ಪೋಸ್ಟರ್ ಗಳನ್ನು ಹಾಕುತ್ತಿದ್ದಾರೆ.
ರಾಹುಲ್ ಗಾಂಧಿ ಅನುಪಸ್ಥಿತಿಯಿಂದ ತಮಗೆ ಎದುರಾಗಿರುವ 10 ಪ್ರಮುಖ ಸಮಸ್ಯೆಗಳನ್ನು ಪಟ್ಟಿ ಮಾಡಿರುವ ಅಮೇಥಿ ಕ್ಷೇತ್ರದ ಜನತೆ, ತಮ್ಮ ಸಂಸದನನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಿಸಿದ್ದಾರೆ.
ಅಮೇಥಿ ಲೋಕಸಭಾ ಕ್ಷೇತ್ರ ಈಗ ನಾಯಕನಿಲ್ಲದ ಕ್ಷೇತ್ರವಾಗಿದೆ. ಕ್ಷೇತ್ರದಲ್ಲಿ ಸರಿಯಾದ ರಸ್ತೆ, ಶಾಲೆ, ಆರೋಗ್ಯ ಸೇವೆಗಳು ಸರಿಯಾಗಿ ದೊರೆಯುತ್ತಿಲ್ಲ. ಲೋಕಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳು ಈವರೆಗೂ ಈಡೇರಿಲ್ಲ ಎಂದು ಅಮೇಥಿ ಲೋಕಸಭಾ ಕ್ಷೇತ್ರದ ಜನತೆ ಆರೋಪಿಸಿದ್ದಾರೆ.
ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಯ ಮೂಲಕ ರಾಹುಲ್ ಗಾಂಧಿ ಅವರು ಅಮೇಥಿಯ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ರಾಹುಲ್ ಗಾಂಧಿಗೆ ದೂರದೃಷ್ಟಿ ಇಲ್ಲ. ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಕಣ್ಮರೆಯಾಗಿದ್ದಾರೆ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಅಮೆಥಿ ಕ್ಷೇತ್ರದ ಜನತೆ ರಾಹುಲ್ ಗಾಂಧಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.