ಪಾಟ್ನಾ : ಎ.ಐ.ಸಿ.ಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ವರ್ಣಭೇದ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ಎಫ್.ಐ.ಆರ್ ದಾಖಲಿಸಲು ಬಿಹಾರದ ನ್ಯಾಯಾಲಯ ಆದೇಶ ನೀಡಿದೆ.
ಸಂಜಯ್ ಕುಮಾರ್ ಸಿಂಗ್ ಎಂಬ ಬಿಹಾರದ ಕಾಂಗ್ರೆಸ್ ಕಾರ್ಯಕರ್ತ, ಗಿರಿರಾಜ್ ಸಿಂಗ್ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದ, ಈ ಬಗ್ಗೆ ವಿಚಾರಣೆ ನಡೆಸಿದ ಉಪವಿಭಾಗೀಯ ನ್ಯಾಯಾಧೀಶ ಅಂಜು ಸಿಂಗ್ ಗಿರಿರಾಜ್ ಸಿಂಗ್ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಸೂಚನೆ ನೀಡಿದ್ದಾರೆ.
ಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಿಥನ್ ಪುರ ಪೊಲೀಸ್ ಠಾಣೆಯಲ್ಲಿ ಗಿರಿರಾಜ್ ಸಿಂಗ್ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗುತ್ತದೆ ಎಂದು ಸಂಜಯ್ ಕುಮಾರ್ ಸಿಂಗ್ ಪರ ವಕೀಲರು ತಿಳಿಸಿದ್ದಾರೆ. ಜನಪ್ರತಿನಿಧಿಯಾಗಿ ಒಬ್ಬ ವ್ಯಕ್ತಿಗೆ ನೋವುಂಟಾಗುವಂತೆ ಮಾತನಾಡಿರುವ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 166ರ ಪ್ರಕಾರ ಕೇಂದ್ರ ಸಚಿವರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗುತ್ತದೆ.
ಗಿರಿರಾಜ್ ಸಿಂಗ್ ವಿರುದ್ಧ ನೀಡಿರುವ ಹೇಳಿಕೆಯಿಂದ ಸೋನಿಯಾ ಗಾಂಧಿಗೆ ನೋವುಂಟಾಗಿದೆ. ಆದ್ದರಿಂದ ಕೇಂದ್ರ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಜಯ್ ಕುಮಾರ್ ಸಿಂಗ್ ಆರೋಪಿಸಿದ್ದರು. ಸೋನಿಯಾ ಗಾಂಧಿಯವರು ಬೆಳ್ಳಗಿರದಿದ್ದರೆ ಕಾಂಗ್ರೆಸ್ ಪಕ್ಷ ಅವರ ನಾಯಕತ್ವವನ್ನು ಒಪ್ಪಿಕೊಳ್ಳುತ್ತಿತ್ತೆ ಎಂದು ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.