ನವದೆಹಲಿ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಜನಾಂಗೀಯ ಹೇಳಿಕೆ ನೀಡಿದ್ದರ ಸಂಬಂಧ ತಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿಲ್ಲ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಭೇಟಿ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗಿರಿರಾಜ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಗಿರಿರಾಜ್ ಸಿಂಗ್, ಸೋನಿಯಾ ಗಾಂಧಿ ಬಗೆಗಿನ ತಮ್ಮ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ ಎಂದು ಹೇಳಲಾಗಿತ್ತು. ಈ ವರದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನರೇಂದ್ರ ಮೋದಿ ತಮ್ಮನ್ನು ತರಾಟೆಗೆ ತೆಗೆದುಕೊಂಡಿರುವ ವಿಷಯವನ್ನು ಅಲ್ಲಗಳೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು ಭೇಟಿ ಮಾಡಿಲ್ಲ, ಭೇಟಿ ಮಾಡಿದ್ದೇನೆಂದು ಯಾರು ಹೇಳಿದ್ದು? ಅದನ್ನು ನೋಡಿದವರು ಯಾರಿದ್ದಾರೆ ಎಂದು ಗಿರಿರಾಜ್ ಸಿಂಗ್ ಪತ್ರಕರ್ತರನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ವರ್ಣಬೇಧ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸಂಸತ್ ನಲ್ಲಿ ಕ್ಷಮೆ ಯಾಚಿದ್ದರು. ಸೋನಿಯಾ ಗಾಂಧಿ ಬೆಳ್ಳಗಿರದಿದ್ದರೆ ಆಕೆಗೆ ಕಾಂಗ್ರೆಸ್ ಪಕ್ಷ ಅಧ್ಯಕ್ಷೆ ಸ್ಥಾನ ನೀಡುತ್ತಿತ್ತೇ? ಎಂದು ಪ್ರಶ್ನಿಸುವ ಮೂಲಕ ವಿವಾದ ಸೃಷ್ಟಿಸಿದ್ದರು.