ನವದೆಹಲಿ : 'ಗಂಗಾ ನದಿ'ಯನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಣೆ ಮಾಡಬೇಕೆಂದು ಪರಿಸರವಾದಿಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಗಂಗಾ ನದಿ ಶುದ್ಧೀಕರಣ ಕಾರ್ಯದಲ್ಲಿ ಸಹಕರಿಸುತ್ತಿರುವ ಖ್ಯಾತ ಪರಿಸರವಾದಿಗಳ ಗುಂಪು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದೆ.
ಗಂಗಾ ನದಿಯನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಲು ಯುನೆಸ್ಕೋ ಜೊತೆ ಮಾತುಕತೆ ನಡೆಸಬೇಕೆಂದು ಕೇಂದ್ರ ಸರ್ಕಾರವನ್ನು ಪರಿಸರವಾದಿಗಳು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಂಜಿತ್ ಭಾರ್ಗವ, ಈ ಬಗ್ಗೆ ಕಳೆದ ವರ್ಷವೇ ಪ್ರಧಾನಿ ಕಾರ್ಯಾಲಯ ಹಾಗೂ ಜಲಸಂಪನ್ಮೂಲ ಸಚಿವಾಲಯಕ್ಕೆ ಪತ್ರ ಬರೆದಿದ್ದಾಗಿ ತಿಳಿಸಿದ್ದಾರೆ.
ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಗಂಗಾ ನದಿ ಶುದ್ಧೀಕರಣಕ್ಕೆ ಆಸಕ್ತಿ ವಹಿಸಿರುವುದರಿಂದ ಇದನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸುವುದು ಸೂಕ್ತ ಹಾಗೂ ಅತಿ ಮುಖ್ಯವಾಗಿದೆ. ಈ ವಿಷಯವನ್ನು ನೇರವಾಗಿ ಪ್ರಧಾನಿ ಅವರೊಂದಿಗೆ ಚರ್ಚಿಸಬೇಕು ಎಂದಿರುವ ರಂಜಿತ್ ಭಾರ್ಗವ, ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.