ಇಸ್ಲಾಮಾಬಾದ್/ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಭಾರತದಲ್ಲಿ ಸಂಭವಿಸಿರುವ ಭೂಕಂಪದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.
ನೇಪಾಳದಲ್ಲಿ ಸಂಭವಿಸಿರುವ ಭೂಕಂಪದ ಬಗ್ಗೆಯೂ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿರುವ ನವಾಜ್ ಷರೀಫ್, ನೇಪಾಳಕ್ಕೆ ಭಾರತ ಸರ್ಕಾರ ನೆರವು ನೀಡುತ್ತಿರುವುದನ್ನು ಶ್ಲಾಘಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಸಹಾಯ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ನವಾಜ್ ಷರೀಫ್ ಅವರಿಂದ ದೂರವಾಣಿ ಕರೆ ಸ್ವೀಕರಿಸಿದ್ದಾಗಿ ತಿಳಿಸಿದ್ದಾರೆ. ನೇಪಾಳಕ್ಕೆ ನೆರವು ನೀಡುತ್ತಿರುವ ಭಾರತದ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತಪಡಿಸಿದ ನವಾಜ್ ಷರೀಫ್ ಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಸಾರ್ಕ್ ರಾಷ್ಟ್ರಗಳ ಪೈಕಿ ಯಾವುದೇ ಒಂದು ರಾಷ್ಟ್ರದಲ್ಲಿ ನೈಸರ್ಗಿಕ ವಿಪತ್ತು ಸಂಭವಿಸಿದರೂ ಉಳಿದ ಎಲ್ಲಾ ರಾಷ್ಟ್ರಗಳು ವಿಪತ್ತು ಸಂಭವಿಸಿರುವ ರಾಷ್ಟ್ರಕ್ಕೆ ಸಹಾಯ ಮಾಡಬೇಕೆಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಗೆ ಸಲಹೆ ನೀಡಿರುವುದಾಗಿ ಮೋದಿ ತಿಳಿಸಿದ್ದಾರೆ.
ಭೂಕಂಪಕ್ಕೆ ತುತ್ತಾಗಿರುವ ನೇಪಾಳಕ್ಕೆ ಭಾರತ ನೆರವು ನೀಡುತ್ತಿರುವುದಕ್ಕೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.