ಉಲಾನ್ ಬಟೋರ್ : ಮೂರು ದಿನಗಳ ಯಶಸ್ವೀ ಚೀನಾ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಂಗೋಲಿಯಾಕ್ಕೆ 2 ದಿನಗಳ ಭೇಟಿಗಾಗಿ ಆಗಮಿಸಿದರು. ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಮಂಗೋಲಿಯಾಕ್ಕೆ ಭೇಟಿ ನೀಡುತ್ತಿದ್ದಾರೆ. ಈ ನೀಟ್ಟಿನಲ್ಲಿ ಐತಿಹಾಸಿಕ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಮಂಗೋಲಿಯಾ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಿ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮತ್ತು ಭಾರತ- ಮಂಗೋಲಿಯಾ ಸಂಬಂಧಕ್ಕೆ 60 ವರ್ಷ ತುಂಬಿದ ಬೆನ್ನಲ್ಲೇ, ಮೋದಿ ಇಲ್ಲಿಗೆ ಆಗಮಿಸಿದ್ದಾರೆ. ಈ ಭೇಟಿ ವೇಳೆ ಉಭಯ ದೇಶಗಳು ಆರ್ಥಿಕ ಸಹಕಾರ, ವ್ಯಾಪಾರ- ವಹಿವಾಟು, ಸಾರಿಗೆ, ಹೆದ್ದಾರಿ, ಸೌರಶಕ್ತಿ, ದ್ವಿಮುಖ ತೆರಿಗೆ ತಡೆ ಒಪ್ಪಂದ ಮತ್ತು ಇಂಧನ ವಲಯಕ್ಕೆ ಸಂಬಂಧಿಸಿದಂತೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಿವೆ.
ಭೇಟಿಯ ಅವಧಿಯಲ್ಲಿ ಮೋದಿ ಅವರು, ಮಂಗೋಲಿಯಾ ಅಧ್ಯಕ್ಷ ಸಾಖೀಆಗಿನಿ ಎಲೆಗ್ಡೋರ್ಜ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ಮೋದಿ, ಭಾನುವಾರ ಮಂಗೋಲಿಯಾ ಸಂಸತ್ ಉದ್ದೇಶಿಸಿ ಮಾತನಾಡಲಿದ್ದಾರೆ. ಮಂಗೋಲಿಯಾ ಸಂಸತ್ ಭಾನುವಾರ ಸಭೆ ನಡೆಸುತ್ತಿರುವುದು ಮತ್ತು ಸಂಸತ್ ನಲ್ಲಿ ವಿದೇಶಿ ಗಣ್ಯರೊಬ್ಬರು ಭಾಷಣ ಮಾಡುತ್ತಿರುವುದು ಕೂಡಾ ಇದೇ ಮೊದಲು.