ಸ್ವಿಜರ್ಲೆಂಡ್ : ಕಪ್ಪು ಹಣ ಸಂಬಂಧ ತವರು ದೇಶಗಳಲ್ಲಿ ತನಿಖೆ ಎದುರಿಸುತ್ತಿರುವ ಸ್ವಿಸ್ ಬ್ಯಾಂಕ್ ಖಾತೆದಾರರ ಪಟ್ಟಿಯನ್ನು ಸ್ವಿಜರ್ಲೆಂಡ್ ಸರ್ಕಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಇಬ್ಬರು ಭಾರತೀಯ ಮಹಿಳೆಯರ ಹೆಸರೂ ಇರುವುದು ಸಂಚಲನಕ್ಕೆ ಕಾರಣವಾಗಿದೆ.
ಸ್ನೇಹ ಲತಾ ಸಾಹಿ ಹಾಗೂ ಸಂಗೀತಾ ಸಾಹಿ ಎಂಬುವರ ಹೆಸರನ್ನು ಸ್ವಿಜರ್ಲೆಂಡ್ ನ ಕೇಂದ್ರೀಯ ತೆರಿಗೆ ಆಡಳಿತ ಸಂಸ್ಥೆ ಗೆಜೆಟ್ ಮೂಲಕ ಬಹಿರಂಗಪಡಿಸಿದೆ. ಈ ಇಬ್ಬರೂ ಮಹಿಳೆಯರ ಹೆಸರು, ಜನ್ಮದಿನಾಂಕ ಹೊರತುಪಡಿಸಿ ಇನ್ಯಾವ ಮಾಹಿತಿಯನ್ನು ಅದು ಬಿಡುಗಡೆ ಮಾಡಿಲ್ಲ. ತನ್ನಲ್ಲಿರುವ ಮಾಹಿತಿಯನ್ನು ಭಾರತ ಸರ್ಕಾರದ ಜತೆ ಹಂಚಿಕೊಳ್ಳಬಾರದು ಎಂದು ಬಯಸುವಿರೇ ಆದಲ್ಲಿ 30 ದಿನದೊಳಗೆ ಸ್ವಿಜರ್ಲೆಂಡ್ ನ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವಂತೆ ಈ ಇಬ್ಬರೂ ಮಹಿಳೆಯರಿಗೆ ಸ್ವಿಜರ್ಲೆಂಡ್ ಸರ್ಕಾರ ಸೂಚಿಸಿದೆ.
ಸ್ನೇಹ ಲತಾ ಸಾಹಿ ಹಾಗೂ ಸಂಗೀತಾ ಸಾಹಿ ಅವರು ಯಾವ ಊರಿನವರು, ಅವರು ಯಾವ ಉದ್ದಿಮೆಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಬೆಳಕಿಗೆ ಬಂದಿಲ್ಲ. ಬ್ರಿಟನ್, ಸ್ಪೇನ್, ರಷ್ಯಾದ ಖಾತೆದಾರರ ಹೆಸರು, ಜನ್ಮದಿನಾಂಕವನ್ನೂ ಸ್ವಿಸ್ ಸರ್ಕಾರ ಬಹಿರಂಗಪಡಿಸಿದೆ. ಆದರೆ ಅಮೆರಿಕ, ಇಸ್ರೇಲಿ ಪ್ರಜೆಗಳ ಸಂಪೂರ್ಣ ಹೆಸರನ್ನು ತಡೆ ಹಿಡಿದಿದೆ. ಜನ್ಮದಿನ ಹಾಗೂ ಇನಿಷಿಯಲ್ ಅನ್ನು ಮಾತ್ರ ನೀಡಿದೆ. ಸ್ವಿಜರ್ಲೆಂಡ್ನ ಫೆಡರಲ್ ಗೆಜೆಟ್ ನಲ್ಲಿ ಈ ತಿಂಗಳಲ್ಲಿ ಈವರೆಗೆ 40 ಮಂದಿಯ ಹೆಸರನ್ನು ಬಹಿರಂಗ ಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಮಂದಿಯ ಹೆಸರು ಪ್ರಕಟವಾಗುವ ನಿರೀಕ್ಷೆ ಇದೆ.