ನವದೆಹಲಿ : ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಪತ್ತೆಯಾದ ಹಿನ್ನಲೆಯಲ್ಲಿ ಮ್ಯಾಗಿಯಿಂದ ದೂರವಿರುವಂತೆ ರಕ್ಷಣಾ ಇಲಾಖೆಯ ಅಧಿಕಾರಿಗಳು ಸೈನಿಕರಿಗೆ ಸಲಹೆ ನೀಡಿದ್ದಾರೆ.
ಉತ್ತರಾಖಂಡ, ಬಿಹಾರ, ದೆಹಲಿ ರಾಜ್ಯಗಳಲ್ಲಿ ನಡೆದ ಪರೀಕ್ಷೆಯಲ್ಲಿ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಪತ್ತೆಯಾಗುತ್ತಿದ್ದಂತೆಯೇ ಮತ್ತು ಕೇಂದ್ರ ಸರ್ಕಾರ ಕೂಡ ಮ್ಯಾಗಿ ನೂಡಲ್ಸ್ ಪರೀಕ್ಷೆಗೆ ಮುಂದಾಗಿರುವ ಹಿನ್ನಲೆಯಲ್ಲಿ ರಕ್ಷಣಾ ಇಲಾಖೆಯ ಅಧಿಕಾರಿಗಳು ಸೈನಿಕರಿಗೆ ಮ್ಯಾಗಿ ಯಿಂದ ದೂರವಿರುವಂತೆ ಸಲಹೆ ನೀಡಿದ್ದಾರೆ. ಅಲ್ಲದೆ ಸೇನಾ ಕ್ಯಾಂಟೀನ್ ಗಳಲ್ಲಿರುವ ಮ್ಯಾಗಿ ನೂಡಲ್ಸ್ ದಾಸ್ತಾನುಗಳನ್ನು ಮುಂದಿನ ಆದೇಶ ಬರುವವರೆಗೂ ಬಳಕೆ ಮಾಡದಂತೆ ಸೂಚಿಸಲಾಗಿದೆ.
ಇನ್ನು ಪಶ್ಚಿಮ ಬಂಗಾಳದಲ್ಲಿಯೂ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶಗಳು ಪತ್ತೆಯಾದ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ ಆಹಾರ ಭದ್ರತಾ ಇಲಾಖೆಯ ಅಧಿಕಾರಿಗಳು ಮ್ಯಾಗಿ ಪರೀಕ್ಷೆಗೆ ಮುಂದಾಗಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಮ್ಯಾಗಿ ಸ್ಯಾಂಪಲ್ ಪ್ಯಾಕೆಟ್ ಗಳನ್ನು ಸಂಗ್ರಹಿಸಲಾಗಿದ್ದು, ಲ್ಯಾಬ್ ಗೆ ಕಳುಹಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ವರದಿ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನೊಂದೆಡೆ ಬಾಂಗ್ಲಾದೇಶ ಸರ್ಕಾರ ನಡೆಸಿದ್ದ ಪರೀಕ್ಷೆಯಲ್ಲಿ ಮ್ಯಾಗಿಯಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿಲ್ಲ ಎಂಬ ವರದಿ ಬಂದ ಬೆನ್ನಲ್ಲೇ ಗೋವಾ ಸರ್ಕಾರದಿಂದಲೂ ಮ್ಯಾಗಿಗೆ ಗ್ರೀನ್ ಸಿಗ್ನಲ್ ದೊರೆತಿದೆ. ಗೋವಾ ರಾಜ್ಯದ ಆಹಾರ ಭದ್ರತಾ ಅಧಿಕಾರಗಳು ಸಂಗ್ರಹಿಸಿದ್ದ ವಿವಿಧ ಸ್ಯಾಂಪಲ್ ಪ್ಯಾಕೆಟ್ ಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ ಸೀಸ ನಿಗದಿತ ಪ್ರಮಾಣದಲ್ಲಿಯೇ ಇದೆ ಎಂದು ವರದಿ ನೀಡಲಾಗಿದೆ.