ಪಾಟ್ನಾ : ಬಿಹಾರ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಪಟ್ನಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಪ್ರಧಾನಿ ಮೋದಿ ಐಐಟಿ ಯನ್ನು ಉದ್ಘಾಟಿಸಿದರು.
ಅಲ್ಲದೆ, ಪ್ರಧಾನಿ ಮೋದಿಯವರು ಮೆಡಿಕಲ್ ಇಲೆಕ್ಟ್ರಾನಿಕ್ಸ್ ಗೆ ಇನ್ಕ್ಯುಬೇಷನ್ ಸೆಂಟರ್ ಹಾಗೂ ಜಗದೀಶ್ಪುರ-ಹಾಲ್ಡಿಯಾ ಗ್ಯಾಸ್ ಪೈಪ್ ಲೈನ್ ಸಹ ಉದ್ಘಾಟಿಸಿದರು.
ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ಸಹ ಪ್ರಧಾನಿ ಮೋದಿಯವರೊಂದಿಗೆ ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು.
'ಪ್ರಧಾನಿಯಾದ ನಂತರ ಬಿಹಾರಕ್ಕೆ ಪ್ರಥಮವಾಗಿ ಭೇಟಿ ನೀಡುತ್ತಿರುವ ನರೇಂದ್ರ ಮೋದಿಯವರನ್ನು ನಾನು ಸ್ವಾಗತಿಸುತ್ತೇನೆ. ಅವರು ಬಿಹಾರಕ್ಕೆ ಕೊಡುತ್ತಿರುವ ಅಭಿವೃದ್ಧಿ ಯೋಜನೆಗಳಿಗೆ ನಾನು ಅವರಿಗೆ ಕೃತಜ್ನತೆ ಸಲ್ಲಿಸುತ್ತೇನೆ' ಎಂದು ನಿತಿಶ್ ಕುಮಾರ್ ಈ ಸಂದರ್ಭದಲ್ಲಿ ಹೇಳಿದರು.
'ಬಿಹಾರದ ಅನೇಕ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಈ ಯೋಜನೆಗಳ ಅನುಷ್ಠಾನಕ್ಕೆ ನಾನು ಪ್ರಧಾನಿಯವರನ್ನು ವಿನಂತಿಸುತ್ತೇನೆ' ಎಂದು ಮುಖ್ಯಮಂತ್ರಿ ನಿತಿಶ್ ಕುಮಾರ್ ಹೇಳಿದ್ದನ್ನು ತಮ್ಮ ಭಾಷಣದಲ್ಲಿ ಸ್ಮರಿಸಿದ ಮೋದಿ, 'ನಾನು ನಿತಿಶ್ ಅವರ ಸಂಕಟವನ್ನು ಅರಿತಿದ್ದೇನೆ. ಪ್ರಧಾನಿ ವಾಜಪೇಯಿ ಅವರ ಸರಕಾರ ಅಧಿಕಾರದಲ್ಲಿ ಮುಂದುವರಿಯದ ಕಾರಣ ಅನೇಕ ಯೋಜನೆಗಳು ಕಾರ್ಯಗತವಾಗಲಿಲ್ಲ' ಎಂದರು.
ಪ್ರಧಾನಿ ಮೋದಿ ಪಟ್ನಾ-ಮುಂಬೈ ಎಸಿ ಎಕ್ಸ್ ಪ್ರೆಸ್ ರೈಲನ್ನು ಲೋಕಾರ್ಪಣೆ ಮಾಡಿದರು. ಅಲ್ಲದೆ, ದನಿಯಾವಾ-ಬಿಹಾರ್ಶರೀಫ್ ರೈಲ್ವೇ ಲೈನ್ ನ್ನು ಸಹ ಅವರು ಉದ್ಘಾಟಿಸಿದರು.
ಪಟ್ನಾದಲ್ಲಿ ಪ್ರಧಾನಿಯವರು ದೀನ್ ದಯಾಳ್ ಉಪಾಧ್ಯಾಯ ಗ್ರಾಮ್ ಜ್ಯೋತಿ ಯೋಜನೆಯನ್ನು ಲೋಕಾರ್ಪಣೆಗೊಳಿಸಿದರು.
ಪ್ರಧಾನಿ ಮೋದಿಯವರನ್ನು ಧರ್ಮೇಂದ್ರ ಪ್ರಧಾನ್ ಅವರು ಸ್ವಾಗತಿಸಿದರು ಹಾಗೂ, ನಿತಿಶ್ ಕುಮಾರ್ ಅವರನ್ನು ಕೇಂದ್ರ ಸಚಿವ ಪಿಯುಷ್ ಗೋಯಲ್ ಸ್ವಾಗತಿಸಿದರು.