ಪಟ್ನಾ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಹಾರದ ಗಯಾ ಪ್ರವಾಸದ ಸಂದರ್ಭದಲ್ಲಿ ನಿಗದಿಯಾಗಿದ್ದ ಬೋಧ್ ಗಯಾ ಭೇಟಿಯನ್ನು ರದ್ದುಪಡಿಸಲಾಗಿದೆ. ಇದಕ್ಕೆ ಕಾರಣ ಸಂಬಂಧಪಟ್ತ ವ್ಯಕ್ತಿಗಳಿಗೆ ಗೊತ್ತಿದೆ ಎಂದು ಶನಿವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಗಯಾದಲ್ಲಿ ಭಾನುವಾರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಪ್ರಧಾನಿ ಮೋದಿ ಅವರು ವಿಮಾನ ನಿಲ್ಡಾಣದ ಸಮೀಪವಿರುವ ಬೋಧ್ ಗಯಾದ ಮಹಾಬೋಧಿ ದೇವಾಲಯಕ್ಕೆ ಭೇಟಿ ನೀಡುವುದಿಲ್ಲ. ಅವರ ಬೋಧ್ ಗಯಾ ಭೇಟಿ ರದ್ದಾಗಿದೆ ಮತ್ತು ಅದಕ್ಕೆ ಕಾರಣಗಳು ಸಂಬಂಧ ಪಟ್ಟ ವ್ಯಕ್ತಿಗಳಿಗೆ ಗೊತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬುದ್ಧರ ಪವಿತ ಸ್ಥಳವಾದ ಬೋಧ್ ಗಯಾ, ಗಯಾದಿಂದ ಸುಮಾರು 12 ಕಿ.ಮೀ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 2 ಕಿ.ಮೀ ದೂರದಲ್ಲಿದೆ.
ಗಯಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿ ಅವರು ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ.
ಸಮಯದ ಅಭಾವದ ಕಾರಣ ಮೋದಿ ಅವರ ಬೋಧ್ ಗಯಾ ಭೇಟಿ ರದ್ದಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗಯಾದಲ್ಲಿ ಹೇಳಿದ್ದಾರೆ. ಬೋಧ್ ಗಯಾದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದ್ದು, ಭದ್ರತಾ ಸಿಬ್ಬಂದಿಯ ತಂಡವೊಂದು ಪ್ರದೇಶಕ್ಕೆ ಭೇಟಿ ನೀಡಿದೆ ಎಂದು ಜಿಲ್ಲಾ ಅಧಿಕಾರಿ ಹೇಳಿದ್ದಾರೆ.
ಈ ವಿಷಯವಾಗಿ ಮಾತನಾಡಿದ ಬೌದ್ಧ ಸನ್ಯಾಸಿ ಒಬ್ಬರು, 2013ರ ಜುಲೈನಲ್ಲಿ ಸರಣಿ ಬಾಂಬ್ ಸ್ಪೋಟಗಳಿಗೆ ತುತ್ತಾಗಿರುವ ಬೋಧ್ ಗಯಾಕ್ಕೆ ಮೋದಿಯವರು ಭೇಟಿ ನೀಡಿದ್ದರೆ ಬೌದ್ಧ ರಾಷ್ಟ್ರಗಳಿಗೆ ಧನಾತ್ಮಕ ಸಂದೇಶವನ್ನು ನೀಡಿದಂತಾಗುತ್ತಿತ್ತು ಎಂದು ಹೇಳಿದ್ದಾರೆ.
ದೇವಾಲಯದ ಆಸುಪಾಸಿನಲ್ಲಿ ಕನಿಷ್ಠ 10 ಬಾಂಬ್ಗಳು ಸ್ಪೋಟಿಸಿದ್ದವು. ಇದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸುದ್ಧಿಯಾಗಿತ್ತು.