ವಾಷಿಂಗ್ಟನ್ : ಮುಂದಿನ ತಿಂಗಳು, ಸೆ. 27 ರಂದು ಸಿಲಿಕಾನ್ ವ್ಯಾಲಿಯಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೆ ಈಗಾಗಲೇ 40,000 ಕ್ಕೂ ಅಧಿಕ ಜನರು ನೋಂದಣಿ ಮಾಡಿಸಿದ್ದಾರೆ.
ಸೆ. 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಅಮೆರಿಕನ್ನರನ್ನು ಉದ್ದೇಶಿಸಿ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿ ಭಾಷಣ ಮಾಡಲಿದ್ದಾರೆ. ಕಳೆದ ವರ್ಷ ನ್ಯೂಯಾರ್ಕ್ ನ ಮ್ಯಾಡಿಸನ್ ಗಾರ್ಡನ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ 30,000 ಜನರು ನೋಂದಣಿ ಮಾಡಿದ್ದರು. ಆದರೆ ಇದು ಈಗಾಗಲೇ ಮ್ಯಾಡಿಸನ್ ಗಾರ್ಡನ್ ನ ನೋಂದಣಿಯನ್ನು ಹಿಂದಕ್ಕೆ ಹಾಕಿದೆ.
ಕಾರ್ಯಕ್ರಮಕ್ಕೆ ಇನ್ನೂ ಒಂದು ತಿಂಗಳು ಇರುವುದರಿಂದ ಸುಮಾರು 50,000 ಕ್ಕೂ ಅಧಿಕ ನೋಂದಣಿಯಾಗಬಹುದೆಂದು ಕಾರ್ಯಕ್ರಮದ ಸಂಘಟಕರು ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ರಾತ್ರಿ 500 ಸಮುದಾಯ ಸಂಘಟನೆಗಳ ನೋಂದಣಿ ಪ್ರಕ್ರಿಯೆ ಅಂತಿಮಗೊಂಡಿದೆ. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಘಟಕರು, ಸೆ. 27 ರ ಕಾರ್ಯಕ್ರಮಕ್ಕೆ 40,000 ಕ್ಕೂ ಅಧಿಕ ನೋಂದಣಿಯಾಗಿದೆ ಎಂದು ತಿಳಿಸಿದ್ದಾರೆ.
ಯಾವುದೇ ಸಮುದಾಯದ ಸಂಘಟನೆಗಳಲ್ಲಿ ಇಲ್ಲದವರಿಗಾಗಿ ಇನ್ನು ಕೆಲವೇ ದಿನಗಳಲ್ಲಿ ವೈಯಕ್ತಿಕ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಆದ್ದರಿಂದ ಒಟ್ಟು ನೋಂದಣಿ 50,000 ಕ್ಕೂ ಅಧಿಕವಾಗಬಹುದು ಎಂಬುದು ಸಂಘಟಕರ ನಿರೀಕ್ಷೆಯಾಗಿದೆ.
ವೆಸ್ಟ್ ಕೋಸ್ಟ್ ನಲ್ಲಿ ಭಾರತೀಯ ಅಮೇರಿಕನ್ನರ ಉದ್ದೇಶಿಸಿ ನಡೆಯುವ ಮೊದಲ ಸಾರ್ವತ್ರಿಕ ಭಾಷಣಕ್ಕೆ ಅತೀ ಹೆಚ್ಚು ಪ್ರತಿಕ್ರಿಯೆ ಬಂದ ಕಾರಣ, ವೈಯಕ್ತಿಕ ನೋಂದಣಿ ಮುಕ್ತಾಯವಾದ ನಂತರ, ಸಂಘಟಕರು ಕಂಪ್ಯೂಟರೀಕೃತ ಡ್ರಾ ನಡೆಸಿ ಉಚಿತ ಟಿಕೇಟ್ ಪಡೆದ ವ್ಯಕ್ತಿಗಳನ್ನು ನಿರ್ಧರಿಸುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೊರಾರ್ಜಿ ದೇಸಾಯಿ ಅವರ ನಂತರ ಕ್ಯಾಲಿಫೋರ್ನಿಯಾಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿಯಾಗಿದ್ದಾರೆ. ಮೊರಾರ್ಜಿ ದೇಸಾಯಿ ಅವರು 1978 ರಲ್ಲಿ ಕ್ಯಾಲಿಫೋರ್ನಿಯಾಗೆ ಭೇಟಿ ನೀಡಿದ್ದರು.
ಜವಾಹರಲಾಲ್ ನೆಹರು ಅವರು ವೆಸ್ಟ್ ಕೋಸ್ಟ್ ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನ ಮಂತ್ರಿಯಾಗಿದ್ದರು.